×
Ad

ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಫೆಲೆಸ್ತೀನೀಯರ ಸಂಖ್ಯೆ 11ಕ್ಕೆ ಏರಿಕೆ: ವರದಿ

Update: 2023-02-24 00:13 IST

ಜೆರುಸಲೇಂ, ಫೆ.23: ಆಕ್ರಮಿತ ಪಶ್ಚಿಮದಂಡೆಯ ನಬ್ಲೂಸ್ ನಗರದ ಮೇಲೆ ಬುಧವಾರ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ಫೆಲೆಸ್ತೀನೀಯರ ಸಂಖ್ಯೆ 11ಕ್ಕೇರಿದ್ದು  100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.

ನಬ್ಲೂಸ್ ನಗರದ ಮೇಲೆ ಆಕ್ರಮಣಕಾರರು ನಡೆಸಿದ ದಾಳಿಯಲ್ಲಿ 23ರಿಂದ 72 ವರ್ಷದವರೆಗಿನ 11 ಮಂದಿ ಹತರಾಗಿದ್ದು ಸುಮಾರು 100 ಮಂದಿ ಗುಂಡೇಟಿನ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇಲಾಖೆ ಹೇಳಿದೆ.

ನಬ್ಲೂಸ್ ನಗರದಲ್ಲಿ ಶಂಕಿತ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಕೆಲವು ಫೆಲೆಸ್ತೀನೀಯರು ಅಡ್ಡಿಪಡಿಸಿದರು ಹಾಗೂ ಯೋಧರತ್ತ ಕಲ್ಲೆಸೆದರು. ಅವರನ್ನು ಚದುರಿಸಲು ಅಶ್ರುವಾಯು ಪ್ರಯೋಗ ವಿಫಲವಾದಾಗ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ನಬ್ಲೂಸ್ ನಗರದಲ್ಲಿ ಆಕ್ರಮಣಕಾರರು ನಡೆಸಿದ ದಾಳಿಯನ್ನು ನಾವು ಖಂಡಿಸುತ್ತೇವೆ ಮತ್ತು ನಮ್ಮ ಜನರ ವಿರುದ್ಧ ಮುಂದುವರಿದ ದಾಳಿಯನ್ನು ಅಂತ್ಯಗೊಳಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರ ವಕ್ತಾರ ನಬಿ ಅಬು ರುಡೆನೆಹ್ ಹೇಳಿದ್ದಾರೆ.

ಇಸ್ರೇಲ್‌ನತ್ತ 6 ಕ್ಷಿಪಣಿ ಪ್ರಯೋಗ:

ಗುರುವಾರ ಬೆಳಿಗ್ಗೆ ಗಾಝಾದಿಂದ ಇಸ್ರೇಲ್ ಪ್ರಾಂತದತ್ತ 6 ಕ್ಷಿಪಣಿಗಳನ್ನು  ಪ್ರಯೋಗಿಸಿದ ಬಳಿಕ ದಕ್ಷಿಣ ಇಸ್ರೇಲ್ ನಗರದಲ್ಲಿ ಸೈರನ್ ಮೊಳಗಿಸಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.

ಕ್ಷಿಪಣಿ ದಾಳಿಯ ಕೆಲ ಕ್ಷಣಗಳ ಬಳಿಕ ಗಾಝಾದಲ್ಲಿ ಸ್ಫೋಟ ಕೇಳಿಬಂದಿದ್ದು ಗಾಝಾದಲ್ಲಿನ ಕೆಲವು ಗುರಿಗಳನ್ನು ಉದ್ದೇಶಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ಬುಧವಾರ ಬೆಳಿಗ್ಗೆ ಇಸ್ರೇಲ್ ಸೇನೆ ಆಕ್ರಮಿತ ಪಶ್ಚಿಮದಂಡೆಯ ನಬ್ಲೂಸ್‌ನಲ್ಲಿ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕ್ಷಿಪಣಿಗಳನ್ನು ಪ್ರಯೋಗಿಸಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಷ್ಕೆಲಾನ್ ಮತ್ತು ಸೆಡೆರಾಟ್ ನಗರದತ್ತ ಧಾವಿಸಿ ಬರುತ್ತಿದ್ದ 5 ಕ್ಷಿಪಣಿಗಳನ್ನು ಇಸ್ರೇಲ್‌ನ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ಆದರೆ 6ನೇ ಕ್ಷಿಪಣಿ ಬಯಲುಪ್ರದೇಶಕ್ಕೆ ಅಪ್ಪಳಿಸಿದ್ದು ಯಾವುದೇ ಅನಾಹುತವಾಗಿಲ್ಲ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ನ ಯುದ್ಧವಿಮಾನಗಳು ಉತ್ತರ ಮತ್ತು ಕೇಂದ್ರ ಗಾಝಾದ ಹಲವು ಗುರಿಗಳ ಮೇಲೆ ದಾಳಿ ನಡೆಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.

Similar News