×
Ad

ಮನುಸ್ಮೃತಿ ಕುರಿತು ಫೆಲೋಶಿಪ್‌ ಪ್ರಕಟಿಸಿದ ಬನಾರಸ್‌ ಹಿಂದು ವಿವಿ: ಸಾಮಾಜಿಕ ಜಾಲತಾಣದಲ್ಲಿ ಟೀಕೆ

Update: 2023-02-24 12:11 IST

ಹೊಸದಿಲ್ಲಿ: ಬನಾರಸ್‌ ಹಿಂದು ವಿಶ್ವವಿದ್ಯಾಲಯದ (Banaras Hindu University) ಧರ್ಮಶಾಸ್ತ್ರ ಮತ್ತು ಮೀಮಾಂಸ ವಿಭಾಗವು  "ಭಾರತೀಯ ಸಮಾಜದಲ್ಲಿ ಮನುಸ್ಮೃತಿಯ (Manusmriti) ಅನ್ವಯ ಸಾಧ್ಯತೆ" (ಅಪ್ಲಿಕೇಬಿಲಿಟಿ ಆಫ್‌ ಮನುಸ್ಮೃತಿ ಇನ್‌ ಇಂಡಿಯನ್‌ ಸೊಸೈಟಿ) ಎಂಬ ವಿಷಯದ ಕುರಿತ ಸಂಶೋಧನಾ ಫೆಲೋಶಿಪ್‌ ಕುರಿತು ಪ್ರಕಟಿಸಿರುವ ಜಾಹೀರಾತೊಂದು ಸಾಕಷ್ಟು ಚರ್ಚೆಗೆ ಗ್ರಾಸವೊದಗಿಸಿದೆ. ಈ ಜಾಹೀರಾತಿನ ಪ್ರಕಾರ ಆಯ್ದ ಅಭ್ಯರ್ಥಿಗೆ ಮಾಸಿಕ ರೂ. 25,380 ಸ್ಟೈಪೆಂಡ್‌ ದೊರೆಯಲಿದೆ.

ಜಾತಿ ವ್ಯವಸ್ಥೆ ಮತ್ತು ಮಹಿಳೆಯರಿಗೆ ಕಡಿಮೆ ಸ್ಥಾನಮಾನ ನೀಡುವುದನ್ನು ಬೆಂಬಲಿಸುವ ಮನುಸ್ಮೃತಿ ಸಾಕಷ್ಟು ವಿವಾದಿತಕ್ಕೀಡಾಗಿದೆ ಎಂದು thequint.com ವರದಿ ಮಾಡಿದೆ.

ಮನುಸ್ಮೃತಿಯ ಕುರಿತ ಫೆಲೋಶಿಪ್‌ ಆರಂಭಿಸಿರುವುದು ಅದನ್ನು ಬೆಂಬಲಿಸಿದಂತೆ ಅಲ್ಲವೇ ಎಂಬ ಪ್ರಶ್ನೆಗೆ ವಿಭಾಗ ಮುಖ್ಯಸ್ಥ ಶಂಕರ್‌ ಕುಮಾರ್‌ ಮಿಶ್ರಾ ಪ್ರತಿಕ್ರಿಯಿಸಿ, ವೇದ ಕಾಲದ ಮುನಿಗಳು ಹಾಗೂ ಋಷಿಗಳು ಅದನ್ನು ಈಗಾಗಲೇ ಬೆಂಬಲಿಸಿರುವುದರಿಂದ ಅದನ್ನು ಪ್ರತ್ಯೇಕವಾಗಿ ಬೆಂಬಲಿಸುವ ಅಗತ್ಯವಿಲ್ಲ ಎಂದು ಹೇಳಿದರಲ್ಲದೆ ಮನುಸ್ಮೃತಿಯು ಜಾತಿ ತಾರತಮ್ಯವನ್ನು ಹಾಗೂ ಮಹಿಳೆಯರಿಗೆ ಎರಡನೇ ದರ್ಜೆ ಸ್ಥಾನಮಾನ ನೀಡುವುದನ್ನು ಬೆಂಬಲಿಸುತ್ತದೆ ಎಂಬುದನ್ನು ಅವರು ಒಪ್ಪಲಿಲ್ಲ.

"ಒಂದು ಪದ ಅನೇಕ ಅರ್ಥಗಳನ್ನು ಹೊಂದಿರಬಹುದು. ಅದನ್ನು ನಾವು ಹೇಗೆ ಅರ್ಥೈಸುತ್ತೇವೆ ಎಂಬುದನ್ನು ಅದು ಆಧರಿಸಿದೆ. ಯಾವುದೇ ಧಾರ್ಮಿಕ ಗ್ರಂಥ ನಮಗೆ ಸುಳ್ಳು ಹೇಳಲು ಅಥವಾ ಕೆಟ್ಟದ್ದಾಗಿ ವರ್ತಿಸಲು ಸಲಹೆ ನೀಡುವುದಿಲ್ಲ. ಬಡವರಿಗೆ ಸಹಾಯ ಮಾಡಿ, ದಾನ ಮಾಡಿ, ನಿಮ್ಮ ಕುಟುಂಬವನ್ನು ಸಲಹಿ ಎಂಬಿತ್ಯಾದಿ ಸಲಹೆ ನೀಡುತ್ತವೆ," ಎಂದು ಅವರು ಹೇಳಿದರು.

ಮನುಸ್ಮೃತಿ ಕುರಿತು ಫೆಲೋಶಿಪ್‌ ಆರಂಭಿಸಿದ ಬನಾರಸ್‌ ಹಿಂದು ವಿವಿಯನ್ನು ಹಲವು ಸಾಮಾಜಿಕ ಜಾಲತಾಣಿಗರು ಟೀಕಿಸಿದ್ದಾರೆ.

ಇದನ್ನೂ ಓದಿ: 3 ಲಕ್ಷ ಹಳೆ ಸರ್ಕಾರಿ ವಾಹನಗಳು ಗುಜಿರಿಗೆ!

Similar News