3 ಲಕ್ಷ ಹಳೆ ಸರ್ಕಾರಿ ವಾಹನಗಳು ಗುಜಿರಿಗೆ!

ಹೊಸದಿಲ್ಲಿ: ವಾಹನ ಗುಜಿರಿಗೆ ಹಾಕುವ ನೀತಿಯ ಅನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂರು ಲಕ್ಷ ಹಳೆ ವಾಹನಗಳನ್ನು ಗುಜಿರಿಗೆ ಹಾಕಲು ಸರ್ಕಾರ ಉದ್ದೇಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ವಾಹನಗಳನ್ನು ಗುಜಿರಿಗೆ ಹಾಕುವ ಉದ್ದೇಶದಿಂದ 3000 ಕೋಟಿ ರೂಪಾಯಿಗಳನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಜೆಟ್ ಬಳಿಕದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಮೋದಿ, ವಾಹನ ಗುಜರಿ ನೀತಿಯು ಹಸಿರು ಪ್ರಗತಿ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಹಳೆಯ ವಾಹನಗಳನ್ನು ಹಂತ ಹಂತವಾಗಿ ಕಡ್ಡಾಯ ವಿಲೇವಾರಿ ಮಾಡುವ ಯೋಜನೆಯ ಅಂಗವಾಗಿ, ಪೊಲೀಸರು ಬಳಸುವ ವಾಹನಗಳು, ಆಂಬುಲೆನ್ಸ್ ಹಾಗೂ ಸಾರ್ವಜನಿಕ ಸಾರಿಗೆ ಬಸ್‌ಗಳು ಸೇರಿದಂತೆ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ ಎಂದು ಹೇಳಿದರು.
ವಾಹನ ಗುಜರಿ ಕಾರ್ಯಕ್ರಮ ನಿಮ್ಮೆಲ್ಲರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಸಲಿದೆ. ಮರು ಬಳಕೆ, ಮರು ಸಿದ್ಧಪಡಿಸುವಿಕೆ ಮತ್ತು ಪುನಶ್ಚೇತನ ಯೋಜನೆಯಡಿ, ನಮ್ಮ ವೃತ್ತೀಯ ಆರ್ಥಿಕತೆಗೆ ಹೊಸ ಒತ್ತು ನೀಡಲಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಯುವಜನತೆ ವೃತ್ತೀಯ ಆರ್ಥಿಕತೆಯ ವಿವಿಧ ವಿಧಾನಗಳಲ್ಲಿ ಜೋಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸರ್ಕಾರದ ಜನ ಸಾರಿಗೆ ನೀತಿ ಬಗ್ಗೆ ಪ್ರಸ್ತಾವಿಸಿದ ಪ್ರಧಾನಿ, ಸದ್ಯೋಭವಿಷ್ಯದಲ್ಲಿ ಇದು ಹೆಚ್ಚು ವೇಗ ಪಡೆಯಲಿದೆ ಎಂದು ಪ್ರಕಟಿಸಿದರು. "ಇಂದು ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಶೇಕಡ 5ರಷ್ಟು ಸರಕುಗಳನ್ನು ಮಾತ್ರ ಕರಾವಳಿ ಮಾರ್ಗದ ಮೂಲಕ ಸಾಗಿಸಲಾಗುತ್ತಿದೆ. ಅಂತೆಯೇ ಶೇಕಡ 2ರಷ್ಟು ಸರಕನ್ನು ಒಳನಾಡು ಜಲಮಾರ್ಗಗಳ ಮೂಲಕ ಸಾಗಿಸಲಾಗುತ್ತಿದೆ. ಭಾರತದಲ್ಲಿ ಜಲ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ವಿಧಾನವು ನಿಮಗೆಲ್ಲರಿಗೆ ಈ ಕ್ಷೇತ್ರದಲ್ಲಿ ಹಲವು ಅವಕಾಶಗಳನ್ನು ಸೃಷ್ಟಿಸಲಿದೆ ಎಂದರು.







