ಪಶ್ಚಿಮದಂಡೆಯಲ್ಲಿ 7000 ಹೊಸ ಮನೆ ನಿರ್ಮಾಣಕ್ಕೆ ಇಸ್ರೇಲ್ ಅನುಮೋದನೆ

Update: 2023-02-24 18:22 GMT

ಟೆಲ್ಅವೀವ್, ಫೆ.24: ಇಸ್ರೇಲ್ನ ಬಲಪಂಥೀಯ ಸರಕಾರವು ಪಶ್ಚಿಮ ದಂಡೆಯಲ್ಲಿನ ಯಹೂದಿ ವಸಾಹತುಗಳಲ್ಲಿ 7000 ಹೊಸ ಮನೆಗಳಿಗೆ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಆಕ್ರಮಿತ ಪ್ರದೇಶದಲ್ಲಿ ಮನೆನಿರ್ಮಾಣಕ್ಕೆ ಇರುವ ಅಂತರಾಷ್ಟ್ರೀಯ ವಿರೋಧವನ್ನು ಈ ಕ್ರಮ ಧಿಕ್ಕರಿಸಿದೆ ಎಂದು ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಫೆಲೆಸ್ತೀನೀಯರು ಪ್ರತಿಪಾದಿಸುತ್ತಿರುವ ಆಕ್ರಮಿತ ಭೂಮಿಯಲ್ಲಿ ಇಸ್ರೇಲಿ ವಸಾಹತು ನಿರ್ಮಾಣವನ್ನು ಕಟುವಾಗಿ ಟೀಕಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬಿಡುಗಡೆಗೊಳಿಸಿದ ಕೆಲ ದಿನಗಳಲ್ಲೇ ಇಸ್ರೇಲ್ನ ಈ ಘೋಷಣೆ ಹೊರಬಿದ್ದಿದೆ.  ಈ ನಿರ್ಣಯದಲ್ಲಿ ಇನ್ನಷ್ಟು ಕಠಿಣ ಕಾನೂನು ಬದ್ಧತೆಯನ್ನು ಸೇರಿಸುವ ಪ್ರಸ್ತಾವನೆಯನ್ನು ಅಮೆರಿಕ ತಡೆಹಿಡಿದಿತ್ತು. ಆಕ್ರಮಿತ ಪ್ರದೇಶದಲ್ಲಿ ಏಕಪಕ್ಷೀಯ ಕ್ರತ್ಯಗಳನ್ನು 6 ತಿಂಗಳು ನಡೆಸುವುದಿಲ್ಲ ಎಂಬ ಭರವಸೆಯನ್ನು ಇಸ್ರೇಲ್ ನೀಡಿದೆ ಎಂದು ಅಮೆರಿಕದ ಪ್ರತಿನಿಧಿಗಳು ವಿಶ್ವಸಂಸ್ಥೆಯಲ್ಲಿ ಹೇಳಿದ್ದರು.

ಗುರುವಾರ ಮುಕ್ತಾಯಗೊಂಡ  2 ದಿನಗಳ ಸಭೆಯಲ್ಲಿ , ಪಶ್ಚಿಮ ದಂಡೆಯಾದ್ಯಂತ 7000 ಮನೆಗಳ ನಿರ್ಮಾಣ ಪ್ರಸ್ತಾವನೆಗೆ ಅನುಮೋದನೆ  ದೊರೆತಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ವಸಾಹತು ವಿರೋಧಿ ಸಂಘಟನೆ ‘ಪೀಸ್ ನೌ’ ಹೇಳಿದ್ದು, ಈ ನಿರ್ಧಾರವು ಫೆಲೆಸ್ತೀನೀಯರ ಜತೆಗಿನ ‘2 ದೇಶ ಪರಿಹಾರ’ ಪ್ರಸ್ತಾವನೆಯನ್ನು ಕಡೆಗಣಿಸಿದೆ ಎಂದಿದೆ.

ಜೆರುಸಲೇಂನ ಪೂರ್ವದಲ್ಲಿರುವ ಇ1 ಎಂದು ಕರೆಯಲ್ಪಡುವ ಆಯಕಟ್ಟಿನ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸುವ ಈ ಯೋಜನೆಯ ಬಗ್ಗೆ ಚರ್ಚಿಸಲು ಸಮಿತಿ ಮುಂದಿನ ತಿಂಗಳು ಸಭೆ ಸೇರಲಿದ್ದು ಆರಂಭಿಕ ಹಂತದಲ್ಲಿ 5,200 ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಘೋಷಣೆಯ ಮೂಲಕ ಇಸ್ರೇಲ್ ಅಮೆರಿಕದ ಮುಖಕ್ಕೆ ಉಗುಳಿದಂತಾಗಿದೆ ಎಂದು ‘ಪೀಸ್ನೌ’ ಅಧಿಕಾರಿಗಳು ಹೇಳಿದ್ದಾರೆ.

ಈ ನಿರ್ಧಾರವು ಎರಡು ದೇಶ ಪರಿಹಾರದ ಭೌಗೋಳಿಕ ಕಾರ್ಯಸಾಧ್ಯತೆಯನ್ನು ಹಾಳುಮಾಡುವ, ಶಾಂತಿ ಪ್ರಕ್ರಿಯೆಗೆ ಅಡಚಣೆಯಾಗಲಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ಅಮೆರಿಕ ತಕ್ಷಣ ಮಧ್ಯಪ್ರವೇಶಿಸಿ, ಈ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಅಡ್ಡಿಯಾಗಲಿರುವ ಉಪಕ್ರಮವನ್ನು ತಡೆಯಬೇಕು ಎಂದು ಫೆಲೆಸ್ತೀನಿಯನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರ ವಕ್ತಾರ ನಬಿ ಅಬು ರುದೆನೆಹ್ ಆಗ್ರಹಿಸಿದ್ದಾರೆ.

Similar News