ರಷ್ಯಾ ವಿರುದ್ಧ ನಿರ್ಣಯ ಮತದಾನದಿಂದ ಹೊರಗುಳಿದ ಭಾರತ ಹೇಳಿದ್ದೇನು?

Update: 2023-02-25 01:58 GMT

ವಿಶ್ವಸಂಸ್ಥೆ: ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಅಮೆರಿಕ ಹಾಗೂ ಯೂರೋಪಿಯನ್ ದೇಶಗಳಿಂದ ಭಾರತದ ಮೇಲೆ ಪ್ರಬಲ ಒತ್ತಡ ಹೇರಿರುವ ನಡುವೆ ಭಾರತ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ "ಶಾಂತಿ ನಿರ್ಣಯ" ಮತದಾನದಿಂದ ಹೊರಗುಳಿದಿದೆ.

ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಕಾರ್ಯಾಚರಣೆಯನ್ನು ಖಂಡಿಸಿ, ತಕ್ಷಣ, ಸಂಪೂರ್ಣ ಹಾಗೂ ಬೇಷರತ್ ಆಗಿ ಉಕ್ರೇನ್‌ನಿಂದ ರಷ್ಯನ್ ಪಡೆಗಳನ್ನು ವಾಪಾಸು ಕರೆಸುವಂತೆ ಈ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ಉಕ್ರೇನ್- ರಷ್ಯಾ ಸಂಘರ್ಷಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 193 ಸದಸ್ಯ ದೇಶಗಳ ಸಾಮಾನ್ಯಸಭೆಯಲ್ಲಿ ಈ ಕುರಿತ ನಿರ್ಣಯವನ್ನು ಆಂಗೀಕರಿಸಲಾಯಿತು. 141 ದೇಶಗಳು ನಿರ್ಣಯದ ಪರವಾಗಿ ಹಾಗೂ ಏಳು ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು. ಚೀನಾ, ಪಾಕಿಸ್ತಾನ ಮತ್ತು ಭಾರತ ಸೇರಿದಂತೆ 32 ದೇಶಗಳು ಮತದಾನದಿಂದ ಹೊರಗುಳಿದಿವೆ.

ಭಾರತದ ರಾಯಭಾರಿ ರುಚಿತ್ರಾ ಕಾಂಬೋಜ್, ಸುಧೀರ್ಘ ಶಾಂತಿಯನ್ನು ಪುನಃಸ್ಥಾಪಿಸುವ ಗುರಿಯ ಬಗ್ಗೆ ನಿರ್ಣಯದಲ್ಲಿ ಇತಿಮಿತಿಗಳು ಇರುವ ಹಿನ್ನೆಲೆಯಲ್ಲಿ ಮತದಾನದಿಂದ ದೂರ ಉಳಿದಿರುವುದಾಗಿ ಸ್ಪಷ್ಟಪಡಿಸಿದರು. ಜತೆಗೆ ಜಾಗತಿಕ ಶಾಂತಿಗೆ ಇರುವ ಅಪಾಯವನ್ನು ಬಗೆಹರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಫಲವಾಗಿರುವುದನ್ನು ಕೂಡಾ ಉಲ್ಲೇಖಿಸಿದರು. ಕರಡು ನಿರ್ಣಯಕ್ಕೆ ರಷ್ಯಾದ ಮಿತ್ರರಾಷ್ಟ್ರವಾದ ಬೆಲೂರಸ್ ಮಂಡಿಸಿದ ತಿದ್ದುಪಡಿ ಪ್ರಸ್ತಾವದ ಮೇಲಿನ ಮತದಾನದಿಂದಲೂ ಭಾರತ ದೂರ ಉಳಿಯಿತು.

Similar News