ನನ್ನ ಇನ್ನಿಂಗ್ಸ್ ಭಾರತ್ ಜೋಡೊ ಯಾತ್ರೆಯೊಂದಿಗೆ ಕೊನೆಗೊಳ್ಳಬಹುದು: ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ ಸೋನಿಯಾ ಗಾಂಧಿ

Update: 2023-02-25 08:36 GMT

ರಾಯ್ಪುರ: ಕಾಂಗ್ರೆಸ್ ಅಧಿ ನಾಯಕಿ ಸೋನಿಯಾ ಗಾಂಧಿ ಅವರು ಶನಿವಾರ ಪಕ್ಷದ ಅಧಿವೇಶನದಲ್ಲಿ ಮಾತನಾಡುತ್ತಾ ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆ ಪ್ರಸ್ತಾಪಿಸಿದರು.

ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಪಕ್ಷದ ಮೂರು ದಿನಗಳ ಸಮಾವೇಶದ ಎರಡನೇ ದಿನವಾದ ಶನಿವಾರ  15,000 ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, "ನನಗೆ ಅತ್ಯಂತ ಸಂತೋಷಕರ ಸಂಗತಿಯೆಂದರೆ, ನನ್ನ ಇನ್ನಿಂಗ್ಸ್ ಭಾರತ್ ಜೋಡೊ ಯಾತ್ರೆಯೊಂದಿಗೆ ಮುಕ್ತಾಯಗೊಳ್ಳಬಹುದು. ಯಾತ್ರೆಯು ಒಂದು ಮಹತ್ವದ ತಿರುವು ನೀಡಿದೆ. ಭಾರತದ ಜನರು ಅಗಾಧವಾಗಿ ಸಾಮರಸ್ಯ, ಸಹಿಷ್ಣುತೆ ಹಾಗೂ  ಸಮಾನತೆಯನ್ನು ಬಯಸುತ್ತಾರೆ ಎಂಬುದನ್ನು ಇದು ಸಾಬೀತುಪಡಿಸಿದೆ’’ ಎಂದರು.

ಕಾಂಗ್ರೆಸ್‌ನ 85 ನೇ ಸರ್ವಸದಸ್ಯರ ಅಧಿವೇಶನವು ಶುಕ್ರವಾರ ಆರಂಭವಾಯಿತು. ಅಧಿವೇಶನದಲ್ಲಿ 2024 ರ ಲೋಕಸಭೆ ಚುನಾವಣೆಗೆ ಇತರ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಬೆಂಬಲಿಗರನ್ನು ಒಟ್ಟುಗೂಡಿಸುವ ಹಾಗೂ  ಮತದಾರರೊಂದಿಗೆ ಪಕ್ಷದ ಸಂಪರ್ಕ ಹೆಚ್ಚಿಸುವ ಗುರಿಯನ್ನು ಹೊಂದಿದ್ದ ರಾಹುಲ್ ಗಾಂಧಿ ನೇತೃತ್ವದ ಬೃಹತ್ ದೇಶಾದ್ಯಂತದ ಕಾಲ್ನಡಿಗೆಯ ಭಾರತ್ ಜೋಡೊ ಯಾತ್ರೆಯ ಹಿನ್ನೆಲೆಯಲ್ಲಿ ಈ ಅಧಿವೇಶನ ನಡೆಸಲಾಗುತ್ತಿದೆ.

Similar News