×
Ad

56 ಇಂಚಿನ ಎದೆ ಶರಣಾಯಿತೇ: ಚೀನಾದೊಂದಿಗೆ ಜಗಳ ಸಾಧ್ಯವಿಲ್ಲವೆಂದ ಜೈಶಂಕರ್‌ ಹೇಳಿಕೆಗೆ ನಿವೃತ್ತ ಸೇನಾಧಿಕಾರಿಗಳ ಪ್ರಶ್ನೆ

Update: 2023-02-25 14:21 IST

ಹೊಸದಿಲ್ಲಿ: ಚೀನಾ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿರುವುದರಿಂದ ಅದರೊಂದಿಗೆ ಹೋರಾಡಲು ಭಾರತಕ್ಕೆ ಸಾಧ್ಯವಾಗದು ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರು ನೀಡಿರುವ ಹೇಳಿಕೆಗೆ ಹಲವು ಮಾಜಿ ಸೇನಾಧಿಕಾರಿಗಳು ಟೀಕಿಸಿದ್ದಾರಲ್ಲದೆ ʻಸ್ನಾಯುಬಲದʼ ರಾಷ್ಟ್ರೀಯವಾದ ಹಾಗೂ ನರೇಂದ್ರ ಮೋದಿ ಸರ್ಕಾರದ 56 ಇಂಚು ಎದೆʼ ಕುರಿತು ಪ್ರಶ್ನಿಸಿದ್ದಾರೆ ಎಂದು telegraphindia.com ವರದಿ ಮಾಡಿದೆ.

ನೌಕಾಪಡೆಯ ಮಾಜಿ ಮುಖ್ಯಸ್ಥ ಹಾಗೂ 1971 ಯುದ್ಧದಲ್ಲಿ ಭಾಗಿಯಾಗಿದ್ದ ಅರುಣ್‌ ಪ್ರಕಾಶ್‌ ಟ್ವೀಟ್‌ ಮಾಡಿ ʻʻಅಂತಾರಾಷ್ಟ್ರೀಯ ಸಂಬಂಧಗಳನ್ನು ಆರ್ಥಿಕತೆಯ ಆಧಾರದಲ್ಲಿ ಅಳೆಯಲಾಗದು. ಕ್ಯುಬಾ, ಉತ್ತರ ಕೊರಿಯಾ ಮತ್ತು ಇರಾನ್‌ನಂತಹ ದೇಶಗಳು ಅಮೆರಿಕಾ, ವಿಯೆಟ್ನಾಂ ಮತ್ತು ಚೀನಾದ ವಿರುದ್ಧ ಹೇಗೆ ನಿಂತಿವೆ? ಪ್ರಜಾಪ್ರಭುತ್ವ ದೇಶವಾಗಿರುವ, ಅಣ್ವಸ್ತ್ರ ಹೊಂದಿರುವ ದೇಶವಾಗಿರುವ ಹಾಗೂ ಪ್ರಬಲ ಆರ್ಥಿಕತೆಯಾಗಿರುವ ಭಾರತವು ಚೀನಾದ ವಿರುದ್ಧ ಎದ್ದು ನಿಲ್ಲಬೇಕು," ಎಂದು ಟ್ವೀಟ್‌ ಮಾಡಿದ್ದಾರೆ.

"ಭಾರತವಲ್ಲ, ಬದಲು ಚೀನಾ ಜಗಳ ಕೆರೆಯುತ್ತಿದೆ ಎಂದು ಜೈಶಂಕರ್‌ಗೆ ತಿಳಿದಿರಬೇಕು," ಎಂದು ಮೇಜರ್‌ ಜನರಲ್ ಶೈಲ್‌ ಝಾ (ನಿವೃತ್ತ) ಹೇಳಿದ್ದಾರೆ. "ಆರ್ಥಿಕತೆಯಾಗಿರಲಿ, ಇಲ್ಲದೇ ಇರಲಿ, ಬೆದರಿಸುವವರಿಗೆ ನಾವು ಬಗ್ಗಿದರೆ ನಾವು ನಮ್ಮ ಆತ್ಮಗೌರವವನ್ನು ಕೈಬಿಟ್ಟಂತೆ. ಇದು ಸ್ವೀಕಾರಾರ್ಹವೇ? ಎಂತಹ ನಾಚಿಕೆ.  ಇವರನ್ನು ಅತ್ಯುತ್ತಮ ವಿದೇಶ ಸಚಿವ ಎಂದು ಹೊಗಳಲಾಗುತ್ತಿದೆ. ಇದು ಪುಕ್ಕಲುತನ," ಎಂದು ಅವರು ಹೇಳಿದ್ದಾರೆ.

ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ಅನಿಲ್‌ ದುಹೂನ್‌ ಟ್ವೀಟ್‌ ಮಾಡಿ "ಚೀನಾ ದೊಡ್ಡ ಆರ್ಥಿಕತೆ, ನಾವು ಅದರ ಜೊತೆ ಯುದ್ಧಕ್ಕೆ ಹೋಗಲು ಸಾಧ್ಯವಿಲ್ಲ. ಅದಕ್ಕೆ ನರೇಂದ್ರ ಮೋದಿ ಅವರು ಚೀನಾಗೆ ಕ್ಲೀನ್‌ ಚಿಟ್‌ ನೀಡಿದರೇ? ಯಾರೂ ನಮ್ಮ ಭೂಭಾಗ ಹೊಕ್ಕಿಲ್ಲ... 56 ಇಂಚು ಮತ್ತು ಲಾಲ್‌ ಆಂಖ್?‌ ಶರಣಾಗತಿ." ಎಂದು ಬರೆದಿದ್ದಾರೆ.

Similar News