ದೇಶಾದ್ಯಂತ ಹೆಚ್ಚುತ್ತಿರುವ ತಾಪಮಾನ: ಇನ್ನೊಂದು ವಿದ್ಯುತ್ ಬಿಕ್ಕಟ್ಟಿನ ಎಚ್ಚರಿಕೆ

Update: 2023-02-25 10:04 GMT

ಹೊಸದಿಲ್ಲಿ, ಫೆ.25: ಭಾರತದ ವಿವಿಧೆಡೆ ಹೆಚ್ಚುತ್ತಿರುವ ತಾಪಮಾನವು ಇತ್ತೀಚಿನ ವಾರಗಳಲ್ಲಿ ವಿದ್ಯುತ್ತಿಗೆ ಬೇಡಿಕೆಯನ್ನು ದಾಖಲೆ ಮಟ್ಟದ ಸನಿಹಕ್ಕೆ ತಲುಪಿಸಿದೆ. ಇದು ಬೇಸಿಗೆಯಲ್ಲಿ ಇನ್ನೊಂದು ಸುತ್ತಿನ ವಿದ್ಯುತ್ ಬಿಕ್ಕಟ್ಟಿನ ಕುರಿತು ಕಳವಳಗಳನ್ನು ಸೃಷ್ಟಿಸಿದೆ.

ಜನವರಿಯಲ್ಲಿ ವಿದ್ಯುತ್ತಿಗೆ ಬೇಡಿಕೆ 211 ಗಿಗಾವ್ಯಾಟ್ಗಳ ಉತ್ತುಂಗಕ್ಕೇರಿತ್ತು ಮತ್ತು ಅದು ಕಳೆದ ಬೇಸಿಗೆಯಲ್ಲಿ ದಾಖಲಾಗಿದ್ದ ಸಾರ್ವಕಾಲಿಕ ಅಧಿಕ ಬೇಡಿಕೆಯ ಸಮೀಪದಲ್ಲಿತ್ತು.  ಕಳೆದ ಬೇಸಿಗೆಯಲ್ಲಿ ತಾಪಮಾನವು 122 ವರ್ಷಗಳಷ್ಟು ಹಳೆಯ ದಾಖಲೆಯನ್ನು ಮುರಿದಿದ್ದು,ಜನರನ್ನು ಹೈರಾಣಾಗಿಸಿತ್ತು. ಇದರೊಂದಿಗೆ ಸಾಂಕ್ರಾಮಿಕದ ಬಳಿಕ ಭಾರೀ ಕೈಗಾರಿಕೆಗಳು ಪುನರಾರಂಭಗೊಂಡಿದ್ದು ವಿದ್ಯುತ್ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿತ್ತು.

ಕಳೆದ ವಾರದಲ್ಲಿ ದೇಶದ ಕೆಲವು ಪ್ರದೇಶಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 11 ಸೆಂಟಿಗ್ರೇಡ್ನಷ್ಟು ಅಧಿಕವಾಗಿತ್ತು, ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಗೋದಿ ಮತ್ತು ಇತರ ಬೆಳೆಗಳ ಮೇಲೆ ಅಧಿಕ ತಾಪಮಾನದ ಪರಿಣಾಮಗಳ ಮೇಲೆ ನಿಗಾಯಿರಿಸುವಂತೆ ರೈತರಿಗೆ ಸಲಹೆ ನೀಡಿತ್ತು.
ವಾಡಿಕೆಗೆ ವಿರುದ್ಧವಾಗಿ ಬಿಸಿಯಾದ ಹವಾಮಾನ ಅವಧಿಗೆ ಮೊದಲೇ ಆರಂಭಗೊಂಡಿರುವುದು ಮತ್ತು ನೀರಾವರಿ ಪಂಪ್ಸೆಟ್ಗಳು ಹಾಗೂ ಏರ್ಕಂಡಿಷನರ್ಗಳ ಬಳಕೆ ಹೆಚ್ಚಿರುವುದು ವಿದ್ಯುತ್ಗೆ ಬೇಡಿಕೆ ಹೆಚ್ಚಲಿದೆ ಎಂಬ ಮುನ್ಸೂಚನೆಗಳನ್ನು ನೀಡಿವೆ. ಇದು ಅಡಚಣೆಗಳಿಂದ ತುಂಬಿದ್ದ ಸತತ ಎರಡು ವರ್ಷಗಳ ಬಳಿಕ ದೇಶದ ವಿದ್ಯುತ್ ಜಾಲವು ಹೊಸ ಒತ್ತಡಕ್ಕೆ ಸಿಲುಕಲಿದೆ ಎಂಬ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ.

ವಿದ್ಯುತ್ ನಿಲುಗಡೆಯನ್ನು ತಪ್ಪಿಸುವ ನಿಟ್ಟಿನಲ್ಲಿ ನೆರವಾಗಲು ಮತ್ತು ದೇಶೀಯ ಕಲ್ಲಿದ್ದಲು ಪೂರೈಕೆಯ ಮೇಲಿನ ಒತ್ತಡವನ್ನು ತಗ್ಗಿಸಲು ಬೇಸಿಗೆ ಸಂದರ್ಭದಲ್ಲಿ ಮೂರು ತಿಂಗಳುಗಳ ಕಾಲ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುವಂತೆ ಆಮದು ಕಲ್ಲಿದ್ದಲನ್ನು ಬಳಸುವ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಈಗಾಗಲೇ ಆದೇಶಿಸಲಾಗಿದೆ.

ಭಾರತದಲ್ಲಿ ಶೇ.70ಕ್ಕೂ ಅಧಿಕ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಕೆಯಾಗುತ್ತಿದೆ ಮತ್ತು ವಿದ್ಯುತ್ ಕೇಂದ್ರಗಳಲ್ಲಿ ಹಾಲಿ ಕಲ್ಲಿದ್ದಲು ದಾಸ್ತಾನು 4.5 ಕೋಟಿ ಟನ್ಗಳ ನಿಗದಿತ ಗುರಿಗಿಂತ ಸಾಕಷ್ಟು ಕೆಳಗೇ ಇದೆ.

ಈಗಿನ ತಾಪಮಾನ ಏರಿಕೆಯು ಮಾರ್ಚ್-ಮೇ ಅವಧಿಯಲ್ಲಿ ಹವಾಮಾನ ವೈಪರೀತ್ಯದ ಸಂಕೇತವಾಗಬೇಕಿಲ್ಲ ಎಂದು ಹೇಳಿರುವ ಐಎಂಡಿಯ ಹವಾಮಾನ ಶಾಸ್ತ್ರ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರಾ ಅವರು,ಫೆಬ್ರವರಿ ತಿಂಗಳಲ್ಲಿ ತಾಪಮಾನ ಇಷ್ಟೊಂದು ಹೆಚ್ಚಿದರೆ ಕಳವಳ ಸಹಜ ಎಂದಿದ್ದಾರೆ.

Similar News