ಜುನೈದ್, ನಾಸಿರ್ ಮೇಲಿನ ದಾಳಿ ನಿಜವಾಗಿ ರೈತರ ಮೇಲಿನ ದಾಳಿಯಾಗಿದೆ: ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ
ಘಟ್ಮೀಕಾ (ರಾಜಸ್ಥಾನ): "ದೇಶಾದ್ಯಂತ ಮುಸ್ಲಿಮರನ್ನು ಆರ್‌ಎಸ್‌ಎಸ್ ಬಿಂಬಿಸಿರುವುದಕ್ಕೆ ವಿರುದ್ಧವಾಗಿ ಮೇವಾತ್ ಪ್ರಾಂತ್ಯದ ಮುಸ್ಲಿಂ ಸಮುದಾಯ ಗೋ ಆರೈಕೆಯಲ್ಲಿ ತೊಡಗಿಕೊಂಡಿದೆ. ಇಲ್ಲಿನ ಮಿಯೊ ಮುಸ್ಲಿಮರು ಸಾಂಪ್ರದಾಯಿಕವಾಗಿ ಗೋ ಆರೈಕೆ ಹಾಗೂ ಹಾಲು ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಇದು ನಿರ್ದಿಷ್ಟವಾಗಿ ರೈತರ ಮೇಲಿನ ಹಲ್ಲೆಯಾಗಿದೆ" ಎಂದು ಭಿವಾನಿಯ ನಾಸಿರ್ ಮತ್ತು ಜುನೈದ್ ಎಂಬ ಯುವಕರ ಭೀಕರ ಹತ್ಯೆ ಪ್ರಕರಣದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್ ಹೇಳಿದ್ದಾರೆ ಎಂದು newsclick.in ವರದಿ ಮಾಡಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಗೋರಕ್ಷಕ ಗುಂಪುಗಳು ಪ್ರಾಥಮಿಕವಾಗಿ ಗೋ ಆರ್ಥಿಕತೆಯನ್ನು ನಾಶ ಮಾಡುವ ಉದ್ದೇಶ ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷವೂ ಮುಸ್ಲಿಂ ಸಮುದಾಯದೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಿಲ್ಲ. ಹೀಗಾಗಿ, ಅವರೊಂದಿಗೆ ನಿಲ್ಲುವುದು ನಮ್ಮ ಸಾಂವಿಧಾನಿಕ ಹಾಗೂ ನೈತಿಕ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೂ ಮುನ್ನ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಅಖಿಲ ಭಾರತ ಕೃಷಿ ಕಾರ್ಮಿಕರ ಒಕ್ಕೂಟದ ಜಂಟಿ ಪ್ರತಿನಿಧಿಗಳ ತಂಡವು ರಾಜಸ್ಥಾನದ ಭರತಪುರ ಜಿಲ್ಲೆಯ ಘಟ್ಮೀಕಾದಲ್ಲಿ ಹರಿಯಾಣದ ಗೋರಕ್ಷಕ ಗುಂಪಿನಿಂದ ಹತ್ಯೆಗೀಡಾದ ಜುನೈದ್ ಹಾಗೂ ನಾಸಿರ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಹತ್ಯೆಗೀಡಾದ ಸಂತ್ರಸ್ತರ ಕುಟುಂಬದ ಸದಸ್ಯರು ಗೋರಕ್ಷಕ ಗುಂಪಿನ ಸದಸ್ಯರು ಸಶಸ್ತ್ರಧಾರಿಗಳಾಗಿ ದೊಡ್ಡ ಸಂಖ್ಯೆಯಲ್ಲಿ ಓಡಾಡುತ್ತಾರೆ ಎಂದು ಮತ್ತೆ ಒತ್ತಿ ಹೇಳಿದರು. ಮತ್ತೆ ಕೆಲವು ಗ್ರಾಮಸ್ಥರು, "ಈ ಕಾನೂನುಬಾಹಿರ ಕೆಲಸಕ್ಕೆ ಹರಿಯಾಣ ಪೊಲೀಸರ ಸಂಪೂರ್ಣ ಬೆಂಬಲವಿದೆ" ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಘಟ್ಮೀಕಾ ಸರಪಂಚರಾದ ರಾಮ್ ಅವತಾರ್, ಫಿರೋಝ್‌ಪುರ್ ಝಿರ್ಕಾದ ತೀರುವಳಿ ಅಧಿಕಾರಿ ತನಗೆ ಕರೆ ಮಾಡಿದಾಗಲೇ ತಮ್ಮ ಗ್ರಾಮದಿಂದ ಇಬ್ಬರು ವ್ಯಕ್ತಿಗಳು ಅಪಹರಣಕ್ಕೀಡಾಗಿರುವ ಸಂಗತಿ ತಿಳಿಯಿತು. ಅವರು, ಜುನೈದ್ ಹಾಗೂ ನಾಸಿರ್‌ನನ್ನು ಹರಿಯಾಣ ಪೊಲೀಸ್ ಇಲಾಖೆಯ ಅಪರಾಧ ತನಿಖಾ ವಿಭಾಗದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು ಎಂದು NewsClick ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ನಾವು ಅಲ್ಲಿಗೆ ತೆರಳಿದಾಗ, ಅವರನ್ನು ಮೋನು ಮನೇಸರ್ ವಶಕ್ಕೆ ಒಪ್ಪಿಸಲಾಗಿದೆ ಎಂಬ ಸಂಗತಿ ತಿಳಿಯಿತು, ಇದರಿಂದ ಗೊಂದಲಕ್ಕೊಳಗಾದ ನಾವು ರಾಜಸ್ಥಾನ ಪೊಲೀಸರಿಗೆ ದೂರು ನೀಡಿದೆವು. ಮಧ್ಯರಾತ್ರಿಯಲ್ಲಿ ನಮ್ಮ ದೂರು ದಾಖಲಾಯಿತು. ಮರು ದಿನ ಬೆಳಗ್ಗೆ ವಾಹನವೊಂದರಲ್ಲಿ ಸುಟ್ಟು ಕರಕಲಾಗಿರುವ ದೇಹಗಳಿವೆ ಎಂಬ ಮಾಹಿತಿ ದೊರೆಯಿತು. ಪೊಲೀಸರು ವಾಹನದ ಚಾಸಿಸ್ ನಂಬರ್ ತಪಾಸಣೆ ಮಾಡಿದಾಗ, ಜುನೈದ್ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ವಾಹನಕ್ಕೆ ಹೋಲಿಕೆಯಾಯಿತು" ಎಂದು ಹೇಳಿದ್ದಾರೆ.
ಈ ಕಾರ್ಯಾಚರಣೆಯು ಗೋರಕ್ಷಕ ಗುಂಪುಗಳು ಹರಿಯಾಣ ಪೊಲೀಸರೊಂದಿಗೆ ಹೊಂದಿರುವ ಅನೈತಿಕ ಸಂಬಂಧದಿಂದ ನಡೆಯುತ್ತಿದ್ದು, ಪೊಲೀಸರು ಮುಸ್ಲಿಂ ವ್ಯಕ್ತಿಗಳಿಂದ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎಂದೂ ಘಟ್ಮೀಕಾ ಸರಪಂಚರಾದ ರಾಮ್ ಅವತಾರ್ ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ರೂ. 1 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಅಖಿಲ ಭಾರತ ಕಿಸಾನ್ ಸಭಾದ ಹಣಕಾಸು ಕಾರ್ಯದರ್ಶಿ ಪಿ. ಕೃಷ್ಣ, ಇದು ಸಂತ್ರಸ್ತರ ಕುಟುಂಬಗಳಿಗೆ ಕೇವಲ ಪರಿಹಾರವಾಗಿದ್ದು, ಅವರ ಕುಟುಂಬಗಳಿಗೆ ಕಾನೂನು ನೆರವು ಒದಗಿಸಿ, ನ್ಯಾಯ ದೊರೆಯುವಂತೆ ಮಾಡುವೆವು ಎಂದು ಭರವಸೆ ನೀಡಿದ್ದಾರೆ.