×
Ad

ದೇವಾಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮಹಾಮಂಡಲ ಬೇಡಿಕೆ

Update: 2023-02-25 19:04 IST

ಉಡುಪಿ, ಫೆ.25: ಸಣ್ಣ ಸಣ್ಣ ಸಮುದಾಯಗಳು ಸಮಾನವಾಗಿ ಅಭಿವೃದ್ಧಿ ಹೊಂದಿದರೆ, ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ನಂಬಿಕೆಯಂತೆ ದೇವಾಡಿಗ, ಶೇರಿಗಾರ್, ಮೊಯ್ಲಿ ಮುಂತಾದ ಉಪನಾಮಾಂಕಿತಗಳಿಂದ ಗುರುತಿಸಲ್ಪಡುವ ನಮ್ಮ ಸಮಾಜಕ್ಕೂ ದೇವಾಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಸೂಕ್ತ ಅನುದಾನ ನೀಡಬೇಕು ಎಂದು  ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ  ಸರಕಾರವನ್ನು ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಸಾಗರ, ಕೊಡಗು, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಸಿಸುತ್ತಿರುವ, ಮುಂಬೈ ಸೇರಿದಂತೆ ವಿದೇಶಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿರುವ ದೇವಾಡಿಗ ಸಮಾಜ 7ರಿಂದ 8ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಬೈಂದೂರು ಕ್ಷೇತ್ರದಲ್ಲಿ ನಿರ್ಣಾಯಕ 38000 ಮತದಾರರ ಸೇರಿದಂತೆ ಕರಾವಳಿಯಲ್ಲಿ ಸುಮಾರು ನಾಲ್ಕು ಮತದಾರರನ್ನು ಹೊಂದಿರುವ ನಮ್ಮ ಸಮಾಜ ರಾಜಕೀಯವಾಗಿ ತೀರಾ ಹಿಂದುಳಿದಿದೆ ಎಂದರು.

ಅನಾದಿ ಕಾಲದಿಂದಲೂ ಸಂಗೀತ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ದೇವಾಡಿಗ ಸಮಾಜ, ರಾಜಕೀಯವಾಗಿ  ಪ್ರಭಾವಶಾಲಿಯಾಗಿ ಬೆಳೆದಿಲ್ಲ. ಡಾ.ವೀರಪ್ಪ ಮೊಯ್ಲಿ ಅವರು ತಮ್ಮ ಸ್ವಸಾಮರ್ಥ್ಯದಿಂದ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿದ್ದರೂ, ಸಮಾಜ ಅದರಿಂದ ಸ್ಪೂರ್ತಿ ಪಡೆಯಲು ವಿಫಲವಾಗಿತ್ತು ಎಂದು ಧರ್ಮಪಾಲ ಯು.ದೇವಾಡಿಗ ತಿಳಿಸಿದರು.

ಸಮಾಜ ಈಗ ಎಚ್ಚೆತ್ತುಕೊಂಡಿದ್ದು, ದೇವಾಡಿಗ ಸಮುದಾಯಕ್ಕೆ ರಾಜ್ಯ ಸರಕಾರ ಸೂಕ್ತ ಸ್ಥಾನಮಾನ ನೀಡಬೇಕು. ಈ ನಿಟ್ಟಿನಲ್ಲಿ ಸಮುದಾಯದ ನಿಯೋಗವೊಂದು ಈ ವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಮಾಜದ ವಿವಿಧ ಬೇಡಿಕೆಗಳನ್ನೊಳ ಗೊಂಡ ಮನವಿಯೊಂದನ್ನು ಅರ್ಪಿಸಿದೆ. ಅದೇ ರೀತಿ ಹಲವು ಸಚಿವರು ಹಾಗೂ ಕರಾವಳಿಯ ಶಾಸಕರನ್ನು ಸಹ ಭೇಟಿಯಾಗಿ ಬೇಡಿಕೆಯನ್ನು ಮಂಡಿಸಿದ್ದೇವೆ. ಎಲ್ಲರಿಂದಲೂ ಸಕಾರಾತ್ಮವಾದ ಉತ್ತರ ಬಂದಿದೆ ಎಂದರು.

ಬೇಡಿಕೆಗಳು:-

ದೇವಾಡಿಗ ಅಭಿವೃದ್ಧಿ ನಿಗಮದ ಸ್ಥಾಪನೆ ಮಾಡಿ ಸೂಕ್ತ ಅನುದಾನ ನೀಡಬೇಕು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವು ದರಿಂದ ವಿವಿಧ ರಾಜಕೀಯ ಪಕ್ಷಗಳಲ್ಲಿ ಪ್ರಮುಖ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಸಮಾಜದ ಮಂದಿಗೆ ಕರಾವಳಿಯ ಯಾವುದೇ ಕ್ಷೇತ್ರ ದಲ್ಲಾದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬೇಕು. ದೇವಸ್ಥಾನ ಸೇರಿದಂತೆ ವಿವಿಧ ಹಿಂದು ಧಾರ್ಮಿಕ ಕ್ಷೇತ್ರಗಳ ಧಾರ್ಮಿಕ ವಿಧಿವಿಧಾನಗಳನ್ನು ತಿಳಿದಿರುವ ದೇವಾಡಿಗ ಸಮಾಜದ ಮಂದಿಗೆ ವ್ಯವಸ್ಥಾಪನ ಸಮಿತಿಗಳಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು.

ನಮ್ಮ ಬೇಡಿಕೆಗಳನ್ನು ರಾಷ್ಟ್ರೀಯ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಈಗಿನ ನಿರ್ಲಕ್ಷ್ಯ ಭಾವನೆ, ಕಡೆಗಣನೆ ಮುಂದುವರಿದರೆ ನಮಗೆ ಮನ್ನಣೆ ನೀಡುವವರನ್ನು ಗುರುತಿಸಿ ಬೆಂಬಲ ನೀಡುವ ಕೆಲಸ ಮಾಡುತ್ತೇವೆ. ಇದಕ್ಕಾಗಿ ಈಗಾಗಲೇ ವಿಶ್ವ ದೇವಾಡಿಗ ಮಹಾಮಂಡಳವನ್ನು ರಚಿಸಿಕೊಂಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ, ಕಾರ್ಯದರ್ಶಿ ಗಣೇಶ ದೇವಾಡಿಗ ಅಂಬಲಪಾಡಿ, ಉಡುಪಿ ದೇವಾಡಿಗ ಸೇವಾಸಂಘದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಶೇರಿಗಾರ್ ಹಾಗೂ ಸದಸ್ಯ ರತ್ನಾಕರ ಜಿ.ಎಸ್. ಉಪಸ್ಥಿತರಿದ್ದರು.

Similar News