×
Ad

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬೆಂಬಲ: ಕ್ಷಮೆ ಕೋರುವಂತೆ, 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗುವಂತೆ ವ್ಯಕ್ತಿಗೆ ಬಲವಂತ

Update: 2023-02-25 21:51 IST

ಪಣಜಿ, ಫೆ. 25: ಅಂಗಡಿ ಮಾಲಕನೋರ್ವ ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿರುವುದಕ್ಕಾಗಿ ಕ್ಷಮೆ ಕೋರುವಂತೆ ಹಾಗೂ ‘‘ಭಾರತ್ ಮಾತಾ ಕಿ ಜೈ’’ ಘೋಷಣೆ ಕೂಗುವಂತೆ ಗುಂಪೊಂದು ಬಲವಂತಪಡಿಸಿದ ಘಟನೆ ಗೋವಾದ ಕಲಂಗೂಟ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಗೋವಾದ ಕಂಲಂಗೂಟ್ನ ಅಂಗಡಿ ಮಾಲಕನೋರ್ವ ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಬೆಂಬಲಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. 

ಈ ಹಿನ್ನೆಲೆಯಲ್ಲಿ ಗುರುವಾರ ತಂಡವೊಂದು ಆಗಮಿಸಿ ಅಂಗಡಿ ಮಾಲಕ ಕ್ಷಮೆ ಕೋರುವಂತೆ ಹಾಗೂ ಘೋಷಣೆ ಕೂಗುವಂತೆ ಬಲವಂತಪಡಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಂಗಡಿ ಮಾಲಕ, ತಾನು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳುತ್ತಿರುವ ದಿನಾಂಕವಿಲ್ಲದ ವೀಡಿಯೊವನ್ನು ಟ್ರಾವೆಲ್ ಬ್ಲಾಗರ್ ಓರ್ವ ಬಿಡುಗಡೆ ಮಾಡಿದ ಬಳಿಕ ಈ ಘಟನೆ ನಡೆದಿದೆ. ಈ ವೀಡಿಯೊವನ್ನು ಚಿತ್ರೀಕರಿಸುವ ಸಂದರ್ಭ ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಅಂಗಡಿ ಮಾಲಕ ಕ್ಷಮೆ ಯಾಚಿಸುವಂತೆ ಗುಂಪು ಬಲವಂತಪಡಿಸುವ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ವೀಡಿಯೊದಲ್ಲಿ ಗುಂಪಿನ ಸದಸ್ಯನೋರ್ವ, ‘‘ಈ ಸಂಪೂರ್ಣ ಗ್ರಾಮ ಕಲಂಗೂಟ್. ಇಲ್ಲಿ ಮುಸ್ಲಿಂ ಲೇನ್ ಅಥವಾ ಇತರ ಯಾವುದೇ ಲೇನ್ ಇಲ್ಲ. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಬೇಡ’’ ಎಂದು ಹೇಳುವುದು ಕಂಡು ಬಂದಿದೆ. ಅನಂತರ ಅಂಗಡಿ ಮಾಲಕ ಮೊಣಕಾಲೂರಿ ಕ್ಷಮೆ ಯಾಚಿಸುವಂತೆ ಹಾಗೂ ‘‘ಭಾರತ್ ಮಾತಾ ಕಿ ಜೈ’’ ಘೋಷಣೆ ಕೂಗುವಂತೆ ಬಲವಂತಪಡಿಸಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸ್ಥಳೀಯ ಪೊಲೀಸರು, ಕ್ಷಮೆ ಕೋರುವಂತೆ ವ್ಯಕ್ತಿಯೋರ್ವನನ್ನು ಗುಂಪೊಂದು ಬಲವಂತಪಡಿಸಿದೆ. ಆದರೆ ಈ ಘಟನೆಗೆ ಸಂಬಂಧಿಸಿ ಇದುವರೆಗೆ ದೂರು ದಾಖಲಾಗಿಲ್ಲ ಎಂದಿದ್ದಾರೆ. 

Similar News