×
Ad

ಕಾಂಗ್ರೆಸ್‌ ಜಾಹೀರಾತಿನಲ್ಲಿ ಕಾಣೆಯಾದ ಮೌಲಾನಾ ಆಝಾದ್ ಭಾವಚಿತ್ರ:‌ ಪಕ್ಷದಿಂದ ಕ್ಷಮೆಯಾಚನೆ

Update: 2023-02-27 12:51 IST

ಹೊಸದಿಲ್ಲಿ: ಹಲವು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪ್ರಕಟವಾದ ಕಾಂಗ್ರೆಸ್‌ನ 85 ನೇ ಸರ್ವಸದಸ್ಯರ ಅಧಿವೇಶನದ ಜಾಹೀರಾತು ಸದ್ಯ ವಿವಾದಕ್ಕೆ ಕಾರಣವಾಗಿದೆ. ಈ ಜಾಹೀರಾತಿನಲ್ಲಿ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್‌ ಕಲಾಂ ಆಝಾದ್‌ ರನ್ನು ಹೊರತುಪಡಿಸಿದ್ದು, ವ್ಯಾಪಕ ಖಂಡನೆ ವ್ಯಕ್ತವಾದ ಬಳಿಕ ಕಾಂಗ್ರೆಸ್‌ ಪಕ್ಷವು ಈ ಕುರಿತು ಕ್ಷಮೆಯಾಚಿಸಿದೆ.

ಇದು ʼಕ್ಷಮಿಸಲಾಗದ ಪ್ರಮಾದʼ ಎಂದ ಕಾಂಗ್ರೆಸ್‌, ಈ ತಪ್ಪಿನ ಕುರಿತು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಪತ್ರಿಕೆಗಳಿಗೆ ನೀಡಿದ ಪೂರ್ಣ ಪುಟದ ಜಾಹೀರಾತಿನಲ್ಲಿ ಶನಿವಾರದಂದು, ಹಿಂದಿನ ಕಾಂಗ್ರೆಸ್ ನಾಯಕರಾದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ ಆರ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ ವಿ ನರಸಿಂಹರಾವ್ ಮತ್ತು ಸರೋಜಿನಿ ನಾಯ್ಡುರ ಚಿತ್ರವನ್ನು ಅಳವಡಿಸಲಾಗಿತ್ತು. ಆದರೆ ಮೌಲಾನಾ ಅಬುಲ್‌ ಕಲಾಂ ಆಝಾದ್‌ ರ ಭಾವಚಿತ್ರವನ್ನು ಕೈಬಿಡಲಾಗಿತ್ತು. 

ಟ್ವಿಟರ್‌ ಸೇರಿದಂತೆ ಇತರ ಸಾಮಾಜಿಕ ತಾಣಗಳಲ್ಲಿ ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕಾಂಗ್ರೆಸ್‌ ಪಕ್ಷವು ಕ್ಷಮೆಯಾಚನೆ ನಡೆಸಿದೆ. ಕಾರ್ಯಕ್ರಮದ ಬ್ಯಾನರ್‌ ನಲ್ಲಿ ಮೌಲಾನಾರ ಫೋಟೊ ಅಳವಡಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಭಾವಚಿತ್ರವನ್ನೂ ಹಂಚಿಕೊಂಡಿದ್ದಾರೆ. 

Similar News