ಇದು ಸಾವರ್ಕರ್ ಸಿದ್ಧಾಂತ, ಇದನ್ನೇ ನೀವು ‘ರಾಷ್ಟೀಯತೆ’ ಎನ್ನುತ್ತೀರಾ?: ಚೀನಾ ಕುರಿತ ಸರಕಾರದ ನಿಲುವಿಗೆ ರಾಹುಲ್ ಕಿಡಿ
ಹೊಸದಿಲ್ಲಿ, ಫೆ. 27: ಚೀನಾವು ಆರ್ಥಿಕವಾಗಿ ಭಾರತಕ್ಕಿಂತ ಬಲಾಢ್ಯವಾಗಿದೆ ಎಂಬ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್(S. Jaishankar) ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಇದು ಹೇಡಿತನವಾಗಿದೆ ಎಂದು ಬಣ್ಣಿಸಿದ್ದಾರೆ.
‘‘ಇದನ್ನು ನೀವು ರಾಷ್ಟ್ರೀಯತೆ ಎಂಬುದಾಗಿ ಕರೆಯುವಿರೇ? ಇದು ಹೇಡಿತನ’’ ಎಂದು ರಾಯ್ಪುರದಲ್ಲಿ ರವಿವಾರ ನಡೆದ ಕಾಂಗ್ರೆಸ್ ಪಕ್ಷದ 85ನೇ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಹೇಳಿದರು.
‘‘ಭಾರತವು ಚೀನಾಕ್ಕಿಂತ ಆರ್ಥಿಕವಾಗಿ ದುರ್ಬಲವಾಗಿದೆ, ನಾವು ಅದರ ವಿರುದ್ಧ ಹೇಗೆ ಹೋರಾಟ ಮಾಡುವುದು ಎಂದು ಒಬ್ಬ ಸಚಿವರು ಸಂದರ್ಶನವೊಂದರಲ್ಲಿ ಹೇಳುತ್ತಾರೆ. ನಾವು ಬ್ರಿಟಿಶರ ವಿರುದ್ಧ ಹೋರಾಡುತ್ತಿದ್ದಾಗ ನಮ್ಮ ಆರ್ಥಿಕತೆ ತುಂಬಾ ದೊಡ್ಡದಾಗಿತ್ತೇ? ಇದು ಸಾವರ್ಕರ್ ಸಿದ್ಧಾಂತ. ನಿಮಗಿಂತ ಬಲಿಷ್ಠರಾಗಿರುವವರ ಮುಂದೆ ಮಂಡಿಯೂರಿ ಎನ್ನುವುದು. ಹಾಗಾದರೆ, ನಿಮಗಿಂತ ದುರ್ಬಲರಾಗಿರುವವರ ವಿರುದ್ಧ ಮಾತ್ರ ನೀವು ಹೋರಾಟ ಮಾಡುತ್ತೀರಾ? ಇದನ್ನೇ ನಾವು ಹೇಡಿತನ ಎನ್ನುವುದು’’ ಎಂದರು.
‘‘ನಮಗೆ ನಿಮ್ಮ ಎದುರು ನಿಲ್ಲಲು ಸಾಧ್ಯವಿಲ್ಲ, ಯಾಕೆಂದರೆ ನೀವು ನಮಗಿಂತ ಬಲಿಷ್ಠರು ಎಂಬುದಾಗಿ ಭಾರತದ ಸಚಿವರು ಚೀನಾಕ್ಕೆ ಹೇಳುತ್ತಿದ್ದಾರೆ. ಇದು ಯಾವ ಮಾದರಿಯ ರಾಷ್ಟ್ರೀಯತೆ? ಇದಕ್ಕೊಂದು ಸೂಕ್ತ ಪದವಿದೆ. ‘ಸತ್ತಾಗ್ರಹಿ’ (ಅಧಿಕಾರಕ್ಕಾಗಿ ಲಾಲಸೆ ಪಡುವವರು). ನಮ್ಮನ್ನು ಸತ್ಯಾಗ್ರಹಿಗಳೆಂದು ಕರೆಯುತ್ತಾರೆ, ಆದರೆ ಅವರು ‘ಸತ್ತಾಗ್ರಹಿಗಳು’’’ ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ಮಾಡಿದರು.
ಇತ್ತೀಚೆಗೆ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಚೀನಾ ವಿಷಯದಲ್ಲಿ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸುತ್ತಾ, ‘‘ಗಡಿ ನಿಯಂತ್ರಣ ರೇಖೆಗೆ ಸೇನೆಯನ್ನು ಕಳುಹಿಸಿದ್ದು ಯಾರು? ರಾಹುಲ್ ಗಾಂಧಿಯಲ್ಲ, ಪ್ರಧಾನಿ ಮೋದಿ ಕಳುಹಿಸಿದ್ದು’’ ಎಂದು ಹೇಳಿದ್ದರು.
‘‘ನಾವು ಗಡಿಯನ್ನು ಬಲಪಡಿಸುತ್ತಿದ್ದೇವೆ ಎಂದು ನಾನು ಹೇಳುವುದಿಲ್ಲ. ನಾವು ಕಾನೂನುಬದ್ಧವಾಗಿ ನಮ್ಮ ಗಡಿ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ. ಯಾಕೆಂದರೆ ಅವರು ಅವರ ಗಡಿ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದಾರೆ. ನನ್ನ ಅಭಿಪ್ರಾಯದ ಪ್ರಕಾರ, ಇದು 25 ವರ್ಷಗಳ ಹಿಂದೆಯೇ ಆಗಬೇಕಾಗಿತ್ತು’’ ಎಂದಿದ್ದರು.
‘‘ನೋಡಿ, ಅವರು (ಚೀನಾ) ಆರ್ಥಿಕವಾಗಿ ಬಲಿಷ್ಠರು. ನಾನು ಏನು ಮಾಡಲಿ? ನಾವು ಆರ್ಥಿಕವಾಗಿ ದುರ್ಬಲರು. ಆರ್ಥಿಕವಾಗಿ ಪ್ರಬಲರಾಗಿರುವ ಅವರೊಂದಿಗೆ ನಾನು ಜಗಳ ಮಾಡಲು ಸಾಧ್ಯವೇ? ಇದು ಪ್ರತಿರೋಧ ವ್ಯಕ್ತಪಡಿಸುವ ವಿಷಯವಲ್ಲ, ಇದು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿಷಯ’’ ಎಂದು ಜೈಶಂಕರ್ ಹೇಳಿದ್ದರು.