'ಸಾಧಕ' ಎಂದು ಸನ್ಮಾನಿಸಿದ್ದ ಉದ್ಯೋಗಿಯನ್ನೇ ವಜಾಗೊಳಿಸಿದ ಗೂಗಲ್: ತಬ್ಬಿಬ್ಬಾದ ನೌಕರನಿಂದ "ನಾನೇ ಏಕೆ?" ಎಂಬ ಪ್ರಶ್ನೆ

Update: 2023-02-28 09:15 GMT

ಹೊಸದಿಲ್ಲಿ: ಕಳೆದ ಕೆಲವು ತಿಂಗಳು ತಂತ್ರಜ್ಞಾನ ಸಂಸ್ಥೆಗಳ ಪಾಲಿಗೆ ಕರಾಳ ದಿನಗಳಾಗಿದ್ದು, ಈ ಅವಧಿಯಲ್ಲಿ ಹಲವಾರು ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸಿವೆ. ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಗೂಗಲ್, ಭಾರತದಲ್ಲೂ ಸುಮಾರು 450 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಗೂಗಲ್‌ನಿಂದ 'ತಾರಾ ಸಾಧಕ' ಎಂದು ಸನ್ಮಾನಕ್ಕೊಳಗಾಗಿದ್ದ ಹೈದರಾಬಾದ್ ಮೂಲದ ಡಿಜಿಟಲ್ ಮಾಧ್ಯಮದ ಹಿರಿಯ ಸಹಾಯಕ ಕೂಡಾ ಸೇರಿದ್ದಾರೆ ಎಂದು ndtv.com ವರದಿ ಮಾಡಿದೆ.

ಗೂಗಲ್‌ನಿಂದ ವಜಾಗೊಳಗಾಗಿರುವ ಆ ಉದ್ಯೋಗಿಯು ಲಿಂಕ್ಡ್‌ಇನ್‌ನಲ್ಲಿ ತನ್ನ ಅಳಲನ್ನು ಸುದೀರ್ಘವಾಗಿ ತೋಡಿಕೊಂಡಿದ್ದಾರೆ. "ಶನಿವಾರ ನನ್ನನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂಬ ಮಾಹಿತಿ ಸ್ವೀಕರಿಸಿದ ಕೂಡಲೇ ನನ್ನ ಹೃದಯ ಬಡಿತ ನಿಂತಂತಾಯಿತು. ಗೂಗಲ್ ನನ್ನನ್ನು ತಿಂಗಳ " ತಾರಾ ಸಾಧಕ" ಎಂದು ಸನ್ಮಾನಿಸಿದ್ದರೂ, ಉದ್ಯೋಗದಿಂದ ವಜಾಗೊಳಿಸಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ಶನಿವಾರದಂದು ನನ್ನ ಮೊಬೈಲ್‌ಗೆ ಗೂಗಲ್‌ನ ಕಾರ್ಯನಿರ್ವಹಣಾ ಕೇಂದ್ರದಿಂದ ಪಾಪ್‌-ಅಪ್ ಇಮೇಲ್ ಅಧಿಸೂಚನೆ ಬಂದಿತ್ತು. ಗೂಗಲ್ ಕಾರ್ಯನಿರ್ವಹಣಾ ಕೇಂದ್ರದ ಉದ್ಯೋಗ ಕಡಿತದ ಭಾಗವಾಗಿ ನಾನು ಸಂತ್ರಸ್ತನಾಗಿದ್ದೆ. ಗೂಗಲ್ ಅತ್ಯಂತ ಮೌಲ್ಯಯುತ, ಪ್ರತಿಷ್ಠಿತ ಸಂಸ್ಥೆಯಾಗಿದೆ. ನಾನು ಹೆಮ್ಮೆಯ #Googler ಆಗಿದ್ದು, ಎಂದಿಗೂ ಹಾಗೇ ಇರುತ್ತೇನೆ. ನನ್ನ ಮೊಟ್ಟಮೊದಲ ಪ್ರಶ್ನೆಯೆಂದರೆ, ನಾನು ತಿಂಗಳ ತಾರಾ ಸಾಧಕನಾಗಿದ್ದರೂ ನನ್ನನ್ನೇಕೆ ವಜಾಗೊಳಿಸಲಾಗಿದೆ ಮತ್ತು ನನ್ನನ್ನೇ ಏಕೆ? ಈ ಪ್ರಶ್ನೆಗೆ ನನಗೆ ಯಾವುದೇ ಉತ್ತರ ಕಾಣುತ್ತಿಲ್ಲ" ಎಂದು ಬರೆದುಕೊಂಡಿದ್ದಾರೆ.

ಉದ್ಯೋಗ ಕಡಿತ ಹೇಗೆ ತನ್ನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಹಂಚಿಕೊಂಡಿರುವ ಆ ಉದ್ಯೋಗಿಯು, "ಎರಡು ತಿಂಗಳ ಮಟ್ಟಿಗೆ ಅರ್ಧ ವೇತನ ನೀಡಲಾಯಿತು! ನನ್ನ ಹಣಕಾಸು ಯೋಜನೆಗಳು ಸಂಪೂರ್ಣ ನಾಶವಾದವು. ಇದು ಶನಿವಾರದಂದು ನಡೆದಿದ್ದು, ಈ ವಿಷಯವನ್ನು ಉಳಿದವರೊಂದಿಗೆ ಹಂಚಿಕೊಳ್ಳುವ ಶಕ್ತಿ ಪಡೆಯಲು ನನಗೆ ಎರಡು ದಿನ ಬೇಕಾಯಿತು ಮತ್ತು ನಾನೀಗ ಉಳಿಯಲು ಮತ್ತೆ ಹೋರಾಟ ಮಾಡಬೇಕಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

ಜನವರಿಯಲ್ಲಿ ಆಲ್ಫಾಬೆಟ್ ಇಂಕ್ 12,000 ಉದ್ಯೋಗಿಗಳು ಅಥವಾ ತನ್ನ ಮಾನವ ಸಂಪನ್ಮೂಲದ ಶೇ. 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಪ್ರಕಟಿಸಿತ್ತು. ಕೆಲವು ಸಿಬ್ಬಂದಿಗಳಿಗೆ ಕಂಪ್ಯೂಟರ್‌ ಪ್ರವೇಶಿಸಲು ಸಾಧ್ಯವಾಗದಾದಾಗಲಷ್ಟೇ ತಾವು ಉದ್ಯೋಗ ಕಳೆದುಕೊಂಡಿದ್ದೇವೆ ಎಂದು ಮನದಟ್ಟಾಗಿತ್ತು. ಈ ಕುರಿತು ಗೂಗಲ್ ಸಿಬ್ಬಂದಿಗಳಿಗೆ ತಿಳಿವಳಿಕೆ ಪತ್ರವೊಂದನ್ನು ರವಾನಿಸಿದ್ದ ಗೂಗಲ್ ಸಿಇಒ ಸುಂದರ್ ಪಿಚ್ಚೈ, ಸಂಸ್ಥೆಯು ತನ್ನ ಉತ್ಪನ್ನಗಳು, ಉದ್ಯೋಗಿಗಳು ಹಾಗೂ ಆದ್ಯತೆಗಳನ್ನು ಮರುಪರಿಶೀಲಿಸಿದ್ದು, ಇದರಿಂದ ಜಗತ್ತು ಹಾಗೂ ತಂತ್ರಜ್ಞಾನ ವಲಯದಾದ್ಯಂತ ಉದ್ಯೋಗ ಕಡಿತಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

Similar News