×
Ad

ನ್ಯಾಯದಲ್ಲಿ ಸಮಾನತೆ ಇದೆಯೇ?: ಬಿಜೆಪಿ ಸೇರಿದ ಬಳಿಕ ಆರೋಪಮುಕ್ತರಾದ ರಾಜಕಾರಣಿಗಳ ಪಟ್ಟಿ ಮುಂದಿಟ್ಟ ಶಶಿ ತರೂರ್‌

Update: 2023-02-28 16:10 IST

ಹೊಸದಿಲ್ಲಿ: ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನದ ಕೋಲಾಹಲದ ನಡುವೆ, ತಿರುವನಂತಪುರಂ ಸಂಸದ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕೆಲವು ನಾಯಕರ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.  ಬಿಜೆಪಿ ಪಕ್ಷಕ್ಕೆ ನಿಷ್ಠರಾದ ನಂತರ ಏಜೆನ್ಸಿಗಳ ತನಿಖೆಯಿಂದ ತಪ್ಪಿಸಿಕೊಳ್ಳುವ ರಾಜಕಾರಣಿಗಳ ಪಟ್ಟಿಯನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಪಟ್ಟಿಯ ಚಿತ್ರವನ್ನು ಹಂಚಿಕೊಂಡ ಸಂಸದರು, “ಇದು ಎಲ್ಲೆಲ್ಲೂ ಹರಡುತ್ತಿದೆ, ಆದ್ದರಿಂದ ನನಗೆ ಸಿಕ್ಕಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾ ಖಾವೂಂಗಾ ನಾ ಖಾನೆ ದೂಂಗಾ (ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ) ಎಂಬುದರ ಅರ್ಥದ ಬಗ್ಗೆ ನಾನು ಯಾವಾಗಲೂ ಅಚ್ಚರಿ ಚಕಿತನಾಗುತ್ತೇನೆ. ಅವರು ಗೋಮಾಂಸ ತಿನ್ನುವುದರ ಬಗ್ಗೆ ಮಾತ್ರ ಹೇಳುತ್ತಿದ್ದರು ಎಂದು ನಾನು ಭಾವಿಸುತ್ತೇನೆ!" ಎಂದು ಅವರು ಬರೆದುಕೊಂಡಿದ್ದಾರೆ. 

ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸಂಸದ ನಾರಾಯಣ ರಾಣೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಲೋಕಸಭೆ ಸಂಸದ ಭಾವನಾ ಗವಾಲಿ, ಶಿವಸೇನೆ ನಾಯಕ ಯಶವಂತ್ ಜಾಧವ್, ಬೈಕುಲ್ಲಾ (ಮಹಾರಾಷ್ಟ್ರ) ಶಾಸಕಿ ಯಾಮಿನಿ ಜಾಧವ್ ಮತ್ತು ಓವಾಲಾ-ಮಜಿವಾಡ (ಮಹಾರಾಷ್ಟ್ರ) ಶಾಸಕ ಪ್ರತಾಪ್ ಸರ್ನಾಯಕ್ ಅವರನ್ನು ಶಶಿ ತರೂರ್‌ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ನಾರಾಯಣ ರಾಣೆ: ಈ ಹಿಂದೆ ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ನಾರಾಯಣ ರಾಣೆ ಅವರು ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ ಎಂಬ ತಮ್ಮದೇ ಪಕ್ಷ ಸ್ಥಾಪಿಸುವ ಮೊದಲು 300 ಕೋಟಿ ರೂ. ಮನಿ ಲಾಂಡರಿಂಗ್ ದಂಧೆಯ ಭಾಗವಾಗಿದ್ದರು ಎಂದು ಆರೋಪಿಸಲಾಗಿತ್ತು. ಅವರು ಬಿಜೆಪಿ ಸೇರಿದ ನಂತರ ಅವರ ವಿರುದ್ಧದ ತನಿಖೆ ನಿಂತುಹೋಯಿತು ಎಂದು ತರೂರ್ ಹಂಚಿಕೊಂಡ ಆರೋಪಗಳ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಸುವೇಂದು ಅಧಿಕಾರಿ: ಪಟ್ಟಿಯಲ್ಲಿ ಸುವೇಂದು ಅಧಿಕಾರಿ ಹೆಸರನ್ನು ಉಲ್ಲೇಖಿಸಲಾಗಿದ್ದು, ಅವರು ನಾರದ ಹಗರಣದಲ್ಲಿ ಆರೋಪಿಯಾಗಿದ್ದರೂ, ಬಿಜೆಪಿಗೆ ಸೇರಿದ ನಂತರ ಅವರ ವಿರುದ್ಧದ ತನಿಖೆ ನಿಂತುಹೋಯಿತು. ಕಾಂಗ್ರೆಸ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಅಧಿಕಾರಿ, 1998 ರಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ಗೆ ಸೇರಿದ್ದರು.

ಹಿಮಂತ ಬಿಸ್ವ ಶರ್ಮ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಲಂಚ ಹಗರಣದಲ್ಲಿ ಆರೋಪಿಯಾಗಿದ್ದರು ಆದರೆ ಅವರು ಬಿಜೆಪಿ ಸೇರಿದ ನಂತರ ಅವರ ವಿರುದ್ಧದ ತನಿಖೆ ನಿಂತುಹೋಯಿತು.

ಭಾವನ ಗಾವಲಿ: ಐದು ಇಡಿ ಸಮನ್ಸ್‌ಗಳನ್ನು ಉತ್ತರಿಸದೇ ಬಿಟ್ಟುಬಿಟ್ಟರೂ, ಮಹಾರಾಷ್ಟ್ರದ ಯವತ್ಮಾಲ್-ವಾಶಿಂ ಲೋಕಸಭೆಯನ್ನು ಪ್ರತಿನಿಧಿಸುತ್ತಿರುವ ಭಾವನಾ ಗವಾಲಿ ಅವರು ಶಿವಸೇನೆಯ ಶಿಂಧೆ ಬಣಕ್ಕೆ ಸೇರಿದವರಾಗಿರುವುದರಿಂದ ಶಿವಸೇನೆ ಸಂಸದೀಯ ಪಕ್ಷದ ಮುಖ್ಯ ಸಚೇತಕರಾಗಿ ನೇಮಕಗೊಂಡಿದ್ದಾರೆ" ಎಂದು ಪಟ್ಟಿ ಆರೋಪಿಸಿದೆ.

ಶಿಂಧೆ ಬಳಗದ ನಾಯಕರು: ಈ ಪಟ್ಟಿಯಲ್ಲಿ ಶಿಂಧೆ ಪಾಳಯ ನಾಯಕರಾದ ಯಶವಂತ್ ಜಾಧವ್, ಯಾಮಿನಿ ಜಾಧವ್ ಮತ್ತು ಪ್ರತಾಪ್ ಸರ್ನಾಯಕ್ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅವರು ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ತನಿಖೆಯಿಂದ ತಪ್ಪಿಸಿಕೊಂಡರು ಎಂದು ಪಟ್ಟಿ ಆರೋಪಿಸಿದೆ.

ಬಿಎಸ್ ಯಡಿಯೂರಪ್ಪ: ಪಟ್ಟಿಯಲ್ಲಿ ಉಲ್ಲೇಖಿಸಿರುವ ಕೊನೆಯ ಹೆಸರು ಬಿಜೆಪಿಯ ಪ್ರಬಲ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರದು. ವಸತಿ ಯೋಜನೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಆರೋಪಿಯಾಗಿದ್ದರು. ಲೋಕಾಯುಕ್ತ ಪೊಲೀಸರು ಈ ಕುರಿತು ಎಫ್‌ಐಆರ್ ಕೂಡಾ ದಾಖಲಿಸಿದ್ದರು. ಕರ್ನಾಟಕ ಹೈಕೋರ್ಟ್ ಅವರ ವಿರುದ್ಧ ಖಾಸಗಿ ದೂರನ್ನು ಮರುಸ್ಥಾಪಿಸಿತು. ನಂತರ ಅವರನ್ನು ಪ್ರಧಾನಮಂತ್ರಿ ಸನ್ಮಾನಿಸಿದರು” ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

Similar News