×
Ad

ಮೋನು ಮನೇಸರ್‌ಗೆ ರಾಜಸ್ಥಾನ ಪೊಲೀಸರು ಕ್ಲೀನ್‌ ಚಿಟ್‌ ನೀಡಿದ್ದಾರೆಂಬುದು ಸುಳ್ಳುಸುದ್ದಿ: ಆಲ್ಟ್‌ ನ್ಯೂಸ್‌ ವರದಿ

ಭಿವಾನಿ ಯುವಕರ ಹತ್ಯೆ ಪ್ರಕರಣ

Update: 2023-02-28 16:18 IST

 ಹೊಸದಿಲ್ಲಿ: ರಾಜಸ್ಥಾನದ ಭರತಪುರ್‌ ಜಿಲ್ಲೆಯ ಇಬ್ಬರು ಮುಸ್ಲಿಂ ಯುವಕರ ಮೃತದೇಹಗಳು ಹರ್ಯಾಣಾದ ಭಿವಾನಿ ಜಿಲ್ಲೆಯಲ್ಲಿ ವಾಹನವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ಆರೋಪಿಗಳಲ್ಲೊಬ್ಬನಾಗಿರುವ ಬಜರಂಗದಳ ಮನೇಸರ್‌ ಜಿಲ್ಲಾ ಸಂಚಾಲಕ ಮೋನು ಮನೇಸರ್‌ ಎಂಬಾತನಿಗೆ ರಾಜಸ್ಥಾನ ಪೊಲೀಸರು ಕ್ಲೀನ್‌ ಚಿಟ್‌ ನೀಡಿದ್ದಾರೆಂಬ ಸುದ್ದಿ ಫೆಬ್ರವರಿ 23 ರಿಂದ ಹರಿದಾಡುತ್ತಿದೆ. ಆದರೆ ಆತನಿಗೆ ಕ್ಲೀನ್‌ ಚಿಟ್‌ ನೀಡಲಾಗಿಲ್ಲ ಎಂಬ ಅಂಶವನ್ನು ಆಲ್ಟ್‌ನ್ಯೂಸ್‌ ಬಯಲು ಮಾಡಿದೆ.

ನ್ಯೂಸ್‌24 ಟ್ವಿಟ್ಟರ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್‌ ಒಂದನ್ನು ಮಾಡಿ "ಮೋನು ಮನೇಸರ್‌ ಮತ್ತು ಲೋಕೇಶ್‌ ಸಿಂಗ್ಲಾ ಅವರ ಹೆಸರುಗಳನ್ನು ರಾಜಸ್ಥಾನ ಪೊಲೀಸರ ವಾಂಟೆಡ್‌ ಪಟ್ಟಿಯಿಂದ ತೆಗೆದುಹಾಕಲಾಗಿದೆ, ಪೊಲೀಸರು ಕ್ಲೀನ್‌ ಚಿಟ್‌ ನೀಡಿದ್ದಾರೆ," ಎಂದು ಹೇಳಿತ್ತು.

ಬಿಜೆಪಿ ಪರ ಓಪಿಇಂಡಿಯಾ ಇಂಗ್ಲಿಷ್‌ ಮತ್ತು ಓಪಿಇಂಡಿಯಾ ಹಿಂದಿ ಕೂಡ ಇದೇ ವಿಷಯವನ್ನು ಎದ್ದುಗಾಣಿಸಿತ್ತು.

ಈ ವಿಚಾರ ಕುರಿತಂತೆ ಸತ್ಯಶೋಧನಾ ವೆಬ್‌ಸೈಟ್‌ ಆಲ್ಟ್‌ ನ್ಯೂಸ್‌ ರಾಜಸ್ಥಾನದ ಹಿರಿಯ ಪೊಲೀಸ್‌ ಅಧಿಕಾರಿಯನ್ನು ಸಂಪರ್ಕಿಸಿದಾಗ ಅನಾಮಧೇಯರಾಗಿ ಉಳಿಯಲು ಬಯಸಿದ ಅವರು ಈ ಪ್ರಕರಣದಲ್ಲಿ ಯಾರಿಗೂ ಕ್ಲೀನ್‌ ಚಿಟ್‌ ನೀಡಲಾಗಿಲ್ಲ ಎಂದಿದ್ದಾರೆ.

"ನಾವು ಸ್ಪಷ್ಟ ಸಾಕ್ಷ್ಯವಿರುವ ಎಂಟು ಹೆಸರುಗಳನ್ನು ಬಿಡುಗಡೆಗೊಳಿಸಿದ್ದೇವೆ. ಇನ್ನೂ ಕೆಲವು ಇತರರು ಶಾಮೀಲಾಗಿರಬಹುದು. ತನಿಖೆ ನಡೆಯುತ್ತಿದೆ," ಎಂದು ಅವರು ಹೇಳಿದ್ದಾರೆ.

ಭರತಪುರ್‌ ಪೊಲೀಸರ ಟ್ವಿಟ್ಟರ್‌ ಹ್ಯಾಂಡಲ್‌ ಕೂಡ ಈ  ಇದೇ ಮಾತನ್ನು ಹೇಳಿದೆ. "ಹರ್ಯಾಣ ಪೊಲೀಸರ ಸಹಯೋಗದೊಂದಿಗೆ ತನಿಖೆ ಮುಂದುವರಿದಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿರುವ ಮೋನು ಮನೇಸರ್‌, ಲೋಕೇಶ್‌ ಸಿಂಗ್ಲಾ ಮತ್ತಿತರ ಎಲ್ಲರ ಕುರಿತು ವಿಸ್ತೃತ ತನಿಖೆ ನಡೆಯುತ್ತಿದೆ," ಎಂದೂ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಕೃಪೆ: Altnews.in

Similar News