ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ಆಲಿಸಲು ಸುಪ್ರೀಂಕೋರ್ಟ್ ನಿರಾಕರಣೆ
ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿಯ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಅವರ ವಿರುದ್ಧದ ಆರೋಪಗಳಲ್ಲಿ ಒಂದು ಆರೋಪವು ಭ್ರಷ್ಟಾಚಾರ ತಡೆ ಕಾಯ್ದೆಯಡಿಯೂ ಇದೆ ಎಂದು ಪರಿಗಣಿಸಿದ ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅವರ ಪೀಠವು ಸಿಸೋಡಿಯಾ ಅವರು ಸೆಕ್ಷನ್ 482 ಸಿಆರ್‌ಪಿಸಿ ಅಡಿಯಲ್ಲಿ ಎಫ್‌ಐಆರ್ ರದ್ದುಗೊಳಿಸಲು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿ ಪರಿಣಾಮಕಾರಿ ಬೇರೆ ಪರಿಹಾರಗಳನ್ನು ಹೊಂದಿದ್ದಾರೆ. ಹೈಕೋರ್ಟ್ ನಲ್ಲೂ ಅವರಿಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು" ಎಂದು ಗಮನಿಸಿದರು.
ಈ ಹಂತದಲ್ಲಿ ಅರ್ಜಿಯನ್ನು ಪರಿಗಣಿಸುವ ನ್ಯಾಯಾಲಯವು "ತಪ್ಪು ಪೂರ್ವನಿದರ್ಶನ"ವನ್ನು ಉಂಟು ಮಾಡುತ್ತದೆ ಎಂದು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಹೇಳಿದರು. "ಇದು ತುಂಬಾ ತಪ್ಪು ಪೂರ್ವನಿದರ್ಶನವನ್ನು ತೋರಿಸುತ್ತದೆ. ದಿಲ್ಲಿಯಲ್ಲಿ ಘಟನೆ ನಡೆದ ಮಾತ್ರಕ್ಕೆ ನಮ್ಮನ್ನು ಸಂಪರ್ಕಿಸಲಾಗುತ್ತದೆ ಎಂದರ್ಥವಲ್ಲ,'' ಎಂದು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಟೀಕಿಸಿದ್ದಾರೆ.
ನ್ಯಾಯಾಲಯವು ತಮ್ಮ ಆದೇಶದಲ್ಲಿ, “ಅರ್ಜಿದಾರರು CrPC ಅಡಿಯಲ್ಲಿ ಪರಿಣಾಮಕಾರಿ ಪರ್ಯಾಯ ಪರಿಹಾರಗಳನ್ನು ಹೊಂದಿದ್ದಾರೆ. ಈ ಹಂತದಲ್ಲಿ ನಾವು ಈ ಪ್ರಕರಣವನ್ನು ಆಲಿಸುವಲ್ಲಿ ಒಲವು ತೋರುತ್ತಿಲ್ಲ" ಎಂದು ಉಲ್ಲೇಖಿಸಿದ್ದಾರೆ.
ಸಿಸೋಡಿಯಾ ಅವರ ಮನವಿಯನ್ನು ಸಿಜೆಐ ಡಿವೈ ಚಂದ್ರಚೂಡ್ ಅವರ ಪೀಠದ ಮುಂದೆ ಹಿರಿಯ ವಕೀಲ ಎಎಂ ಸಿಂಘ್ವಿ ಅವರು ಬೆಳಿಗ್ಗೆ ಪ್ರಸ್ತಾಪಿಸಿದರು. ಪೀಠವು ಆರಂಭದಲ್ಲಿ ಈ ಕುರಿತು ಆಲಿಸಲು ಆಸಕ್ತಿ ತೋರದಿದ್ದರೂ, ಇಂದು ಮಧ್ಯಾಹ್ನ 3:50 ಕ್ಕೆ ಮನವಿಯನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು.
"ಸೆಕ್ಷನ್ 482 CrPC ಅಡಿಯಲ್ಲಿ ನೀವು ಹೈಕೋರ್ಟ್ ಮುಂದೆ ನಿಮ್ಮ ಪರಿಹಾರಗಳನ್ನು ಹೊಂದಿದ್ದೀರಿ" ಎಂದು ಸಿಜೆಐ ಹೇಳಿದ್ದಾರೆ.,