ತಪ್ಪಾದ ವ್ಯಕ್ತಿಯ ʻಶಂಕಿತ ಎನ್‌ಕೌಂಟರ್ʼ: ಸಿಐಡಿ ತನಿಖೆಗೆ ಆದೇಶಿಸಿದ ಅಸ್ಸಾಂ ಸಿಎಂ

Update: 2023-02-28 14:42 GMT

ಹೊಸದಿಲ್ಲಿ: ಅಸ್ಸಾಂ ಪೊಲೀಸರು ಫೆಬ್ರವರಿ 24 ರಂದು ʻತಪ್ಪಾದ ವ್ಯಕ್ತಿಯನ್ನುʼ ಎನ್‌ಕೌಂಟರ್‌ ಮಾಡಿದ್ದಾರೆಂಬ ಆರೋಪ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಈಗಾಗಲೇ ಈ ಪ್ರಕರಣದ ಕುರಿತು  ನಡೆಯುತ್ತಿರುವ ಮೆಜಿಸ್ಟೀರಿಯಲ್‌ ತನಿಖೆಯ ಹೊರತಾಗಿ ಸಿಐಡಿ ತನಿಖೆಗೆ ಆದೇಶಿಸಲಾಗಿದೆ.

ರಾಜ್ಯದ ಹಳೆಯ ಡಕಾಯಿತ ಕೆನರಮ್‌ ಬಸುಮತರಿ ಎಂಬಾತನನ್ನು ಉದಲಗಿರಿ ಜಿಲ್ಲೆಯ ಧನಸಿರಿಖುತಿ ದೈಫಂಗ್‌ ಗ್ರಾಮದಲ್ಲಿ ಆತನ ಕಳ್ಳತನ ಯತ್ನವನ್ನು ಪೊಲೀಸ್‌ ತಂಡ ತಡೆದಾಗ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದರು.

ಆದರೆ ಈ ಘಟನೆ ನಡೆದ ಮರುದಿನ ಜೆಂಗ್ರೆನ್ಪಾರ ಗ್ರಾಮದ ಕುಟುಂಬವೊಂದು ಉಡಲಗುರಿ ಜಿಲ್ಲಾ ಎಸ್ಪಿ ಅವರನ್ನು ಸಂಪರ್ಕಿಸಿ ಗುಂಡಿನ ಚಕಮಕಿಯಲ್ಲಿ ಮೃತ ವ್ಯಕ್ತಿ  ದಿಂಬೇಶ್ವರ ಮುಚಹರಿ ಆಲಿಯಾಸ್‌ ಗೋಬ್ಲಾ ಎಂದು ಹೇಳಿತ್ತು. ಪೊಲೀಸರು ತಪ್ಪಿ ಆತನನ್ನು ಸಾಯಿಸಿದ್ದಾರೆ ಎಂದೂ ಕುಟುಂಬ ಹೇಳಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಘಟನೆಯ ವಾಸ್ತವಾಂಶ ತಿಳಿಯಲು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

Similar News