ಬಿಜೆಪಿಗೆ 1 ಲಕ್ಷ ರೂ. ದಂಡ ವಿಧಿಸುವ ಆದೇಶವನ್ನು ಹಿಂಪಡೆದ ಸುಪ್ರೀಂ ಕೋರ್ಟ್

Update: 2023-02-28 16:48 GMT

ಹೊಸದಿಲ್ಲಿ, ಫೆ. 28: ತಾನು ನೀಡಿರುವ ನಿರ್ದೇಶನಗಳನ್ನು ಪಾಲಿಸಲು ವಿಫಲವಾಗಿರುವುದಕ್ಕಾಗಿ ಬಿಜೆಪಿ(BJP)ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವ ತನ್ನ 2021ರ ಆದೇಶವನ್ನು ಸುಪ್ರೀಂ ಕೋರ್ಟ್(Supreme Court) ಹಿಂದಕ್ಕೆ ಪಡೆದಿದೆ. 2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಗಳನ್ನು ಬಹಿರಂಗಪಡಿಸುವಂತೆ ಸೂಚಿಸಿ ನೀಡಲಾಗಿದ್ದ ನಿರ್ದೇಶನಗಳನ್ನು ಬಿಜೆಪಿ ಸಂಪೂರ್ಣವಾಗಿ ಪಾಲಿಸಿಲ್ಲ ಎಂಬ ಕಾರಣಕ್ಕೆ ಸರ್ವೋಚ್ಛ ನ್ಯಾಯಾಲಯ ದಂಡ ವಿಧಿಸಿತ್ತು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್(BL Santhosh) ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ(Dinesh Maheshwari) ಮತ್ತು ಬಿ.ಆರ್.ಗವಾಯಿ(B.R. Gavai) ಅವರನ್ನೊಳಗೊಂಡ ನ್ಯಾಯಪೀಠವೊಂದು ವಿಚಾರಣೆಗೆ ಅಂಗೀಕರಿಸಿತು. ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕಾಗಿ ಪಕ್ಷವು ಆರಿಸಿದ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ನ್ಯಾಯಾಲಯ ನೀಡಿರುವ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆಯೂ ನಡೆದಿಲ್ಲ, ನ್ಯಾಯಾಂಗ ನಿಂದನೆಯೂ ಆಗಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಕ್ರಿಮಿನಲ್ ಅಭ್ಯರ್ಥಿಗಳನ್ನು ಯಾಕೆ ಆಯ್ಕೆ ಮಾಡಲಾಯಿತು ಎನ್ನುವುದಕ್ಕೆ ಬಿಜೆಪಿ ಕಾರಣಗಳನ್ನು ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ 2021ರಲ್ಲಿ ಸುಪ್ರೀಂ ಕೋರ್ಟ್ ಬಿಜೆಪಿಗೆ ದಂಡ ವಿಧಿಸಿತ್ತು. ಆದರೆ, ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ಆಯ್ಕೆಗೆ ಕಾರಣಗಳನ್ನು ನೀಡುವ ಅಗತ್ಯವಿಲ್ಲ, ಅವರ ಕ್ರಿಮಿನಲ್ ಹಿನ್ನೆಲೆಗಳನ್ನು ಬಹಿರಂಗಪಡಿಸಿದರೆ ಸಾಕು ಎಂಬುದಾಗಿ ಸುಪ್ರೀಂ ಕೋರ್ಟ್ನ ನಂತರದ ತೀರ್ಪುಗಳು ಸ್ಪಷ್ಟಪಡಿಸಿವೆ ಎಂದು ತನ್ನ ಮರುಪರಿಶೀಲನಾ ಅರ್ಜಿಯಲ್ಲಿ ಬಿಜೆಪಿ ವಾದಿಸಿದೆ.

ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ನಡೆಸಬಾರದು ಎಂಬ ನಿಯಮವನ್ನು ನ್ಯಾಯಪೀಠವು ಒಪ್ಪುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ಕಳಂಕಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸಂಸತ್ತು ತೆಗೆದುಕೊಳ್ಳುತ್ತದೆ ಹಾಗೂ ಸೂಕ್ತ ಕಾನೂನಿನ ಅನುಪಸ್ಥಿತಿಯಲ್ಲಿ, ಇಂಥ ತಡೆಯನ್ನು ನ್ಯಾಯಾಲಯ ನೀಡುವಂತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವು ತನ್ನ 2021ರ ಆದೇಶದಲ್ಲಿ, ಬಿಜೆಪಿಗಲ್ಲದೆ, ಸಿಪಿಎಮ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ತಲಾ 5 ಲಕ್ಷ ರೂಪಾಯಿ, ಹಾಗೂ ಕಾಂಗ್ರೆಸ್, ಜನತಾ ದಳ (ಯು), ರಾಷ್ಟ್ರೀಯ ಜನತಾ ದಳ, ಸಿಪಿಐ ಮತ್ತು ಲೋಕ ಜನಶಕ್ತಿ ಪಾರ್ಟಿಗೂ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು.

Similar News