ಆರೆಸ್ಸೆಸ್ ಪಥ ಸಂಚಲನ: ತ.ನಾ. ಮೇಲ್ಮನವಿ ವಿಚಾರಣೆ ನಡೆಸಲಿರುವ ಸುಪ್ರೀಂ

Update: 2023-03-01 17:55 GMT

ಹೊಸದಿಲ್ಲಿ, ಮಾ. 1:  ತಮಿಳುನಾಡಿನಾದ್ಯಂತ ಪಥ ಸಂಚಲನ ನಡೆಸಲು ಆರೆಸ್ಸೆಸ್ ಗೆ ಅನುಮತಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ತಮಿಳುನಾಡು ಸರಕಾರ ಸಲ್ಲಿಸಿದ ಮೇಲ್ಮನವಿಯನ್ನು ಮಾರ್ಚ್ 3ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ. 

‌ಪಥ ಸಂಚಲನ ಮಾರ್ಚ್ 5ರಿಂದ ನಡೆಯಲಿರುವುದರಿಂದ ಮನವಿಯ ತುರ್ತು ವಿಚಾರಣೆ ನಡೆಸುವಂತೆ ರಾಜ್ಯಸರಕಾರದ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡಿತು. 

‘‘ನಾನು ಮನವಿಯ ವಿಚಾರಣೆಯನ್ನು ಶುಕ್ರವಾರ ನಡೆಸುವಂತೆ ಕೋರುತ್ತೇನೆೆ’’ ಎಂದು ಮುಕುಲ್ ರೋಹ್ಟಗಿ ಹೇಳಿದರು. ‘‘ನಾವು ಮನವಿಯ ವಿಚಾರಣೆಯನ್ನು ಶುಕ್ರವಾರ ನಡೆಸಲಿದ್ದೇವೆೆೆ’’ ಎಂದು ಪೀಠ ಹೇಳಿತು. 

ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಅಸ್ತಿತ್ವ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಗಮನದಲ್ಲಿ ಇರಿಸಿಕೊಂಡು 6 ಜಿಲ್ಲೆಗಳಲ್ಲಿ ಪಥ ಸಂಚಲನ ನಡೆಸಲು ರಾಜ್ಯ ಸರಕಾರ ಅನುಮತಿ ನಿರಾಕರಿಸಿದೆ ಎಂದು ರೋಹ್ಟಗಿ ನ್ಯಾಯಾಲಯಕ್ಕೆ ತಿಳಿಸಿದರು. 
ಆರು ಜಿಲ್ಲೆಗಳಲ್ಲಿ ಕ್ರೀಡಾಂಗಣದಂತಹ ಮುಚ್ಚಿದ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಆರ್‌ಎಸ್‌ಎಸ್‌ಗೆ  ಅನುಮತಿ ನೀಡಲಾಗಿದೆ. ಆದರೆ, ಪಥ ಸಂಚಲನ ನಡೆಸಲು ಅನುಮತಿ ನೀಡಿಲ್ಲ. ರಾಜ್ಯದ ನಿರ್ಧಾರಕ್ಕೆ ಉಚ್ಚ ನ್ಯಾಯಾಲಯದ ಏಕಸಸ್ಯ ಪೀಠ ಒಪ್ಪಿಕೊಂಡಿತ್ತು ಎಂದು ಅವರು ಹೇಳಿದ್ದಾರೆ. 

ಆದರೆ, ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಮರು ನಿಗದಿಪಡಿಸಲಾದ ದಿನಾಂಕಗಳಲ್ಲಿ ತನ್ನ ಪಥ ಸಂಚಲನವನ್ನು ನಡೆಸಲು ಆರ್‌ಎಸ್‌ಎಸ್‌ಗೆ ಫೆಬ್ರವರಿ 10ರಂದು ಅನುಮತಿ ನೀಡಿತ್ತು. ಅಲ್ಲದೆ, ಪ್ರತಿಭಟನೆ ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ ಎಂದು ಅಭಿಪ್ರಾಯಿಸಿತ್ತು ಎಂದು ರೋಹ್ಟಗಿ ಹೇಳಿದರು. 

Similar News