×
Ad

ಯೆನೆಪೊಯ ಡೀಮ್ಡ್ ವಿವಿಗೆ ‘ಪ್ರಾಜೆಕ್ಟ್ ಮಂಗಳ’ ಯೋಜನೆ ವಿಸ್ತರಣೆ

Update: 2023-03-02 22:12 IST

ಮಂಗಳೂರು:ಯೆನೆಪೊಯ ಡೀಮ್ಡ್ ವಿಶ್ವವಿದ್ಯಾನಿಲಯಕ್ಕೆ ‘ಪ್ರಾಜೆಕ್ಟ್ ಮಂಗಳ’ ಯೋಜನೆಯನ್ನು ವಿಸ್ತರಿಸಲಾಗಿದೆ. ಅಂಚೆ ಇಲಾಖೆಯ ಮಂಗಳೂರು ವಿಭಾಗವು ಯೆನೆಪೊಯ ವಿವಿಯೊಂದಿಗೆ ಮಾಡಿಕೊಂಡ ಒಪ್ಪಂದಂತೆ ವಿವಿ ಅಧೀನದಲ್ಲಿರುವ 11 ಕಾಲೇಜುಗಳ ಅಂತಿಮ ವರ್ಷದ ಅಂಕಪಟ್ಟಿಗಳು, ಡಿಗ್ರಿ ಸರ್ಟಿಫಿಕೆಟ್‌ಗಳು ಇನ್ಮುಂದೆ ಸ್ಪೀಡ್‌ಪೋಸ್ಟ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಲಿದೆ.

ಈ ವಿಶಿಷ್ಟ ಸೇವೆ (ಪ್ರಾಜೆಕ್ಟ್ ಮಂಗಳ)ಯನ್ನು ರಾಜ್ಯದಲ್ಲೇ ಪ್ರಥಮ ಬಾರಿಗೆ ಕಳೆದ ವರ್ಷ ಕೆಪಿಟಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಇದೀಗ ದೇರಳಕಟ್ಟೆಯ ಯೆನೆಪೊಯ ಶಿಕ್ಷಣ ಸಂಸ್ಥೆಯಲ್ಲಿ ಆರಂಭಿಸಿದೆ. ಯೆನೆಪೊಯ ವಿವಿಯ ಉಪಕುಲಪತಿ ಡಾ.ಎಂ.ವಿಜಯ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಡಾ.ಗಂಗಾಧರ ಸೋಮಯಾಜಿ, ಪರೀಕ್ಷೆಯ ನಿಯಂತ್ರಕ ಡಾ. ಬಿ.ಟಿ ನಂದಿಶ್, ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಶ್ರೀಹರ್ಷ ಮತ್ತಿತರರು ‘ಪ್ರಾಜೆಕ್ಟ್ ಮಂಗಳ’ದ ಲೋಗೊ ಅನಾವರಣಗೊಳಿಸಿದರು.

ಅಂಚೆ ಇಲಾಖೆಯು ಈಗಾಗಲೇ ವಿವಿಧ ಸಕಾರಿ ದಾಖಲೆಗಳು, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪಾನ್‌ಕಾರ್ಡ್, ವೋಟರ್ ಐಡಿ, ಜನನ/ಮರಣ ಪ್ರಮಾಣ ಪತ್ರ, ಡೆಬಿಟ್ ಕಾರ್ಡ್, ಎಟಿಎಂ ಕಾರ್ಡ್, ಚೆಕ್‌ಬುಕ್ ಮುಂತಾದ ಲಕ್ಷಾಂತರ ದಾಖಲೆಗಳನ್ನು ಹಲವು ವರ್ಷಗಳಿಂದ ಪ್ರತಿದಿನ ಜನರ ಮನೆಬಾಗಿಲಿಗೆ ತಲುಪಿಸುತ್ತಿದ್ದು, ಈಗ ಎಲ್ಲಾ ಬಗೆಯ ಶೈಕ್ಷಣಿಕ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ತಲುಪಿಸಲಿದೆ ಎಂದು ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಶ್ರೀಹರ್ಷ ತಿಳಿಸಿದರು.

ಈ ಸಂದರ್ಭ ಯೆನೆಪೊಯ ವಿವಿಯ ಹಣಕಾಸು ಅಧಿಕಾರಿ ಅಬ್ದುಲ್ ಮೊಹಸಿನ್, ಮಂಗಳೂರಿನ ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್.ಬಿ., ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‌ಗಳಾದ  ಶಂಕರ್ ಕೆ, ಸುಭಾಷ್ ಪಿ. ಸಾಲ್ಯಾನ್ ಉಪಸ್ಥಿತರಿದ್ದರು.

Similar News