×
Ad

ಅದಾನಿ ಗ್ರೂಪ್‌ನಿಂದ ವಿಮಾನ ನಿಲ್ದಾಣಕ್ಕೆ ಬಳಕೆದಾರ ಅಭಿವೃದ್ಧಿ ಶುಲ್ಕ ಹೆಚ್ಚಿಸುವ ಪ್ರಸ್ತಾವ

Update: 2023-03-02 22:23 IST

ಹೊಸದಿಲ್ಲಿ,ಮಾ.2: ಅದಾನಿ ಗ್ರೂಪ್ ನಿರ್ವಹಿಸುತ್ತಿರುವ ಲಕ್ನೋ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ ಲಿ.ದೇಶಿಯ ಮತ್ತು ಅಂತರರಾಷ್ಟ್ರೀಯ ನಿರ್ಗಮನ ಯಾನಗಳಿಗಾಗಿ ಬಳಕೆದಾರ ಅಭಿವೃದ್ಧಿ ಶುಲ್ಕಗಳಲ್ಲಿ ಹೆಚ್ಚಳವನ್ನು ಪ್ರಸ್ತಾವಿಸಿದೆ.

ಈ ಪ್ರಸ್ತಾವವು ಸೀಕೃತಗೊಂಡರೆ ಲಕ್ನೋದಿಂದ ವಿಮಾನ ಪ್ರಯಾಣವು ದುಬಾರಿಯಾಗಲಿದೆ.

ಬಳಕೆದಾರ ಅಭಿವೃದ್ಧಿ ಶುಲ್ಕವನ್ನು ದೇಶಿಯ ನಿರ್ಗಮನಗಳಿಗಾಗಿ 192 ರೂ.ಗಳಿಂದ 1,025 ರೂ.ಗಳಿಗೆ ಮತ್ತು ಅಂತರರಾಷ್ಟ್ರೀಯ ನಿರ್ಗಮನಗಳಿಗಾಗಿ 561 ರೂ.ಗಳಿಂದ 2,756 ರೂ.ಗಳಿಗೆ ಹೆಚ್ಚಿಸಲು ಅದಾನಿ ಗ್ರೂಪ್ ಪ್ರಸ್ತಾವಿಸಿದೆ. ಅದು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERA)ಕ್ಕೆ ತನ್ನ ಪ್ರಸ್ತಾವವನ್ನು ಸಲ್ಲಿಸಿದೆ.

ದೇಶಿಯ ಮತ್ತು ಅಂತರರಾಷ್ಟ್ರೀಯ ಕಾರ್ಗೊ ನಿರ್ವಹಣೆ ಸೇವೆಗಳು,ಸಮಗ್ರ ಇಂಧನ ಸಂಗ್ರಹ ಮತ್ತು ಪೂರೈಕೆ ದರಗಳನ್ನು ಹೆಚ್ಚಿಸಲೂ ಅದಾನಿ ಗ್ರೂಪ್ ಪ್ರಸ್ತಾವಿಸಿದೆ.

ಬಳಕೆದಾರ ಅಭಿವೃದ್ಧಿ ಶುಲ್ಕಗಳನ್ನು ಪ್ರಯಾಣಿಕರು ನೇರವಾಗಿ ಭರಿಸಿದರೆ,ಇತರ ವೈಮಾನಿಕ ಶುಲ್ಕಗಳನ್ನು ವಿಮಾನಯಾನ ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತದೆ. ಈ ಸಂಸ್ಥೆಗಳು ತಮ್ಮ ಕಾರ್ಯಾಚರಣೆ ವೆಚ್ಚಗಳ ಆಧಾರದಲ್ಲಿ ವಿಮಾನಯಾನ ದರಗಳನ್ನು ನಿಗದಿಗೊಳಿಸುತ್ತವೆ.

ಮಾಧ್ಯಮಗಳ ವರದಿಯಂತೆ ಶುಲ್ಕ ಹೆಚ್ಚಳವನ್ನು 2023,ಎ.1ರಿಂದ 2025,ಎ.1ರವರೆಗೆ ಮೂರು ಹಂತಗಳಲ್ಲಿ ಜಾರಿಗೊಳಿಸಲು ಅದಾನಿ ಗ್ರೂಪ್ ಉದ್ದೇಶಿಸಿದೆ. ಹೆಚ್ಚಿಸಲಾದ ದರಗಳು ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತಾವದ ಕುರಿತು ಪ್ರತಿಕ್ರಿಯಿಸಿರುವ ಎಇಆರ್ಎ,ತಾನು ವಿವೇಚನೆಯಿಂದ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಮತ್ತು ಎಲ್ಲ ಪಾಲುದಾರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಶುಲ್ಕಗಳನ್ನು ನಿರ್ಧರಿಸುತ್ತೇನೆ. ಅಂತಿಮ ಶುಲ್ಕಗಳು ವಿಮಾನ ನಿಲ್ದಾಣ ನಿರ್ವಾಹಕರು ಸಲ್ಲಿಸಿರುವ ದರಗಳಿಗಿಂತ ಭಿನ್ನವಾಗಿರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Similar News