ವಿಶ್ವದ ನಂ. 1 ಶ್ರೀಮಂತ ಪಟ್ಟವನ್ನು ಮತ್ತೆ ಕಳೆದುಕೊಂಡ ಎಲಾನ್‌ ಮಸ್ಕ್‌

Update: 2023-03-03 07:20 GMT

ನ್ಯೂಯಾರ್ಕ್‌: ಟೆಸ್ಲಾ ಹಾಗೂ ಟ್ವಿಟರ್‌ (Twitter) ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರು ಮತ್ತೊಮ್ಮೆ ತಮ್ಮ ವಿಶ್ವದ ನಂ. 1 ಶ್ರೀಮಂತ ಸ್ಥಾನವನ್ನು ಕಳೆದುಕೊಂಡಿದ್ದಾರೆ. ನಂ.1 ಸ್ಥಾನವನ್ನು ಇತ್ತೀಚೆಗಷ್ಟೇ ಮಸ್ಕ್‌ ಮರುಪಡೆದುಕೊಂಡಿದ್ದರೂ ಅದಾದ 48 ಗಂಟೆಗಳಲ್ಲಿಯೇ ಆ ಸ್ಥಾನ ಅವರ ಕೈತಪ್ಪಿದೆ.

ಬುಧವಾರ ಟೆಸ್ಲಾ ಷೇರುಗಳ ಮೌಲ್ಯ ಶೇ. 5 ಕ್ಕಿಂತಲೂ ಹೆಚ್ಚು ಕುಸಿತ ಕಂಡಿದ್ದರಿಂದ ಮಸ್ಕ್‌ ಅವರ ಒಟ್ಟು ಸಂಪತ್ತಿನ ಮೌಲ್ಯ 2 ಬಿಲಿಯನ್‌ ಡಾಲರ್‌ನಷ್ಟು ಕಡಿಮೆಯಾಗಿದ್ದು ಫ್ರೆಂಚ್‌ ಲಕ್ಸುರಿ ಬ್ರ್ಯಾಂಡ್‌ ಲೂಯಿಸ್‌ ವಿಯುಟ್ಟನ್‌ ಮುಖ್ಯಸ್ಥ ಬೆರ್ನಾರ್ಡ್‌ ಆರ್ನಾಲ್ಟ್‌ ಮತ್ತೆ ನಂ. 1 ಶ್ರೀಮಂತ ಪಟ್ಟಕ್ಕೇರಿದ್ದಾರೆ.

ಬುಧವಾರ ಮಸ್ಕ್‌ ಅವರ ಒಟ್ಟು ಸಂಪತ್ತಿನ ಮೌಲ್ಯ 184 ಬಿಲಿಯನ್‌ ಡಾಲರ್‌ಗೆ ಕುಸಿದಿದ್ದು ಆರ್ನಾಲ್ಟ್‌ ಅವರ ಸಂಪತ್ತಿನ ಮೌಲ್ಯ 186 ಬಿಲಿಯನ್‌ ಡಾಲರ್‌ ಆಗಿದೆ.

ಇತ್ತೀಚೆಗಷ್ಟೇ ಮಸ್ಕ್‌ ಅವರ ಸಂಪತ್ತಿನ ಮೌಲ್ಯ 187.1 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿ ಅವರು ಬ್ಲೂಂಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ನಲ್ಲಿ ಅಗ್ರ ಪಟ್ಟಕ್ಕೇರಿದ್ದರು. ಆದರೆ ಈಗ ಮಸ್ಕ್‌ ಎರಡನೇ ಸ್ಥಾನಕ್ಕೆ ಸರಿದಿದ್ದಾರೆ.

ಡಿಸೆಂಬರ್‌ 2022 ರಲ್ಲಿ ಟೆಸ್ಲಾ ಷೇರುಗಳ ಬೆಲೆ ಶೇ 65 ರಷ್ಟು ಕುಸಿತ ಕಂಡಾಗ ಮಸ್ಕ್‌ ತಮ್ಮ ಮೊದಲ ಸ್ಥಾನವನ್ನು ಆರ್ನಾಲ್ಟ್‌ ಅವರಿಗೆ ಬಿಟ್ಟುಕೊಡುವಂತಾಗಿತ್ತು.

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ, ಐಟಿ ದಾಳಿ ಟೀಕಿಸಿದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಜಸ್ಟಿಸ್  ರೋಹಿಂಟನ್ ನಾರಿಮನ್

Similar News