NGOಗಳು ಮುಕ್ತವಾಗಿ ಕಾರ್ಯಾಚರಿಸುವಂತಿರಬೇಕು: ಭಾರತದಲ್ಲಿ ವಿದೇಶಿ ದೇಣಿಗೆ ನಿರ್ಬಂಧ ಕುರಿತು ಅಮೆರಿಕ

Update: 2023-03-03 11:22 GMT

ಹೊಸದಿಲ್ಲಿ: ಎನ್ಜಿಒಗಳು ಮತ್ತು ನಾಗರಿಕ ಸಮಾಜ ಮುಕ್ತವಾಗಿ ಕಾರ್ಯಾಚರಿಸುವ ಮಹತ್ವದ ಬಗ್ಗೆ ತನ್ನ ದೇಶವು ಭಾರತದೊಂದಿಗೆ ಚರ್ಚಿಸಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಅವರು ಇಲ್ಲಿ ಹೇಳಿದರು.

ಗುರುವಾರ ಇಲ್ಲಿ ಜಿ-20 ವಿದೇಶಾಂಗ ಸಚಿವರ ಸಭೆಯ ನೇಪಥ್ಯದಲ್ಲಿ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕೆನ್ ಭಾರತದಲ್ಲಿ ಎನ್ಜಿಒಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳಿಗೆ ವಿದೇಶಿ ದೇಣಿಗೆಯ ಮೇಲಿನ ನಿರ್ಬಂಧಗಳ ಕುರಿತು ಪ್ರಶ್ನೆಗೆ ಉತ್ತರಿಸುತ್ತಿದ್ದರು.

‘ನಾವು ಹಿಂದೆ ಈ ಪ್ರಶ್ನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಹಾಗೂ ಎನ್ಜಿಒಗಳು ಮತ್ತು ನಾಗರಿಕ ಸಮಾಜ,ಅವು ನಮ್ಮ ದೇಶದಲ್ಲಿ ಅಥವಾ ಇಲ್ಲಿ ಈ ದೇಶದಲ್ಲಿರಲಿ, ಪರಿಣಾಮಕಾರಿಯಾಗಿ ಮತ್ತು ಮುಕ್ತವಾಗಿ ಕಾರ್ಯಾಚರಿಸಲು ಸಾಧ್ಯವಿರುವುದರ ಮಹತ್ವದ ಕುರಿತು ಭಾರತದೊಂದಿಗೆ ಚರ್ಚಿಸಿದ್ದೇವೆ’ ಎಂದು ಹೇಳಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರವಷ್ಟೇ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ)ಯಡಿ ಚಿಂತನ ಚಿಲುಮೆ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ನ ಪರವಾನಿಗೆಯನ್ನು 180 ದಿನಗಳ ಅವಧಿಗೆ ಅಮಾನತುಗೊಳಿಸಿದೆ.

2017 ಮತ್ತು 2021ರ ನಡುವೆ 6,677 ಎನ್ಜಿಒಗಳ ಎಫ್ಸಿಆರ್ಎ ಪರವಾನಿಗೆಗಳನ್ನು ತಾನು ರದ್ದುಗೊಳಿಸಿರುವುದಾಗಿ ಕೇಂದ್ರವು ಕಳೆದ ವರ್ಷ ಸಂಸತ್ತಿನಲ್ಲಿ ತಿಳಿಸಿತ್ತು.
‘ಮಾನವ ಹಕ್ಕುಗಳಿಗೆ ನಮ್ಮ ದೇಶವು ಬದ್ಧವಾಗಿರುವಂತೆ ಅವುಗಳಿಗೆ ತನ್ನ ಬದ್ಧತೆಯನ್ನೂ ಎತ್ತಿ ಹಿಡಿಯುವಂತೆ ಉತ್ತೇಜಿಸಲು ಭಾರತದೊಂದಿಗೆ ಅಮೆರಿಕವು ನಿಯಮಿತವಾಗಿ ಮಾತುಕತೆಗಳನ್ನು ನಡೆಸುತ್ತಿರುತ್ತದೆ. ಜೈಶಂಕರ್ ಅವರೊಂದಿಗಿನ ಹೆಚ್ಚಿನ ಮಾತುಕತೆಗಳ ಸಂದರ್ಭ ನಾವು  ಈ ವಿಷಯವನ್ನು ಚರ್ಚಿಸಿದ್ದೇವೆ, ಇಂದೂ ನಾವು ಆ ಬಗ್ಗೆ ಚರ್ಚಿಸಿದ್ದೇವೆ’ ಎಂದೂ ಗುರುವಾರ ಬ್ಲಿಂಕೆನ್ ಹೇಳಿದರು.

ಭಾರತದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆ ಮತ್ತು ಮಾನವ ಹಕ್ಕುಗಳ ಕಳವಳಗಳ ಕುರಿತು ಪ್ರಶ್ನೆಗೆ ಬ್ಲಿಂಕೆನ್, ‘ನಮ್ಮ ಪ್ರಜಾಪ್ರಭುತ್ವಗಳು ನಿಜಕ್ಕೂ ನಮ್ಮ ಜನರ ಅಗತ್ಯಗಳನ್ನು ಪೂರೈಸಬಲ್ಲವು ಎನ್ನುವುದನ್ನು ತೋರಿಸಲು ನಾವು ಜೊತೆಯಾಗಿ ಕಾರ್ಯ ನಿರ್ವಹಿಸಬೇಕಿದೆ. ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯ,ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವ ಸ್ವಾತಂತ್ರ್ಯದಂತಹ ಸಾರ್ವತ್ರಿಕ ಮಾನವ ಹಕ್ಕುಗಳಿಗೆ ಗೌರವ ಸೇರಿದಂತೆ ನಮ್ಮ ಪ್ರಮುಖ ಮೌಲ್ಯಗಳಿಗೆ ನಮ್ಮ ಬದ್ಧತೆಯನ್ನು ನಾವು ಮುಂದುವರಿಸಬೇಕು ಮತ್ತು ಇದು ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಗೊಳಿಸುತ್ತದೆ ’ ಎಂದು ಉತ್ತರಿಸಿದರು. ಕಳೆದ ತಿಂಗಳು ಭಾರತದಲ್ಲಿಯ ಬಿಬಿಸಿ ಕಚೇರಿಗಳ ಮೇಲೆ ತೆರಿಗೆ ಅಧಿಕಾರಿಗಳ ದಾಳಿಯ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿತ್ತು.

Similar News