ಆರೆಸ್ಸೆಸ್ ಪಥ ಸಂಚಲನ ಪ್ರಕರಣ: ಸುಪ್ರೀಂಕೋರ್ಟ್‌ ನಲ್ಲಿ ತಮಿಳುನಾಡು ಸರಕಾರ ಹೇಳಿದ್ದೇನು?

Update: 2023-03-03 14:52 GMT

ಹೊಸದಿಲ್ಲಿ: ಕೆಲವು ಪ್ರದೇಶಗಳಲ್ಲಿ ನಿಷೇಧಿತ ಸಂಘಟನೆಗಳಿಂದ ಅಪಾಯದ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸಲು ಉದ್ದೇಶಿಸಿರುವ ಪಥ ಸಂಚಲನದ ಕುರಿತು ಕಾರ್ಯಸಾಧು ಪರಿಹಾರ ಹುಡುಕಿಕೊಳ್ಳುತ್ತೇವೆ ಎಂದು ಶುಕ್ರವಾರ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈ ನಡುವೆ, ಮಾರ್ಚ್ 5ರಂದು ತಾನು ಪಥ ಸಂಚಲನ ನಡೆಸುವ ಸಾಧ್ಯತೆ ಇಲ್ಲ ಮತ್ತು ಅದನ್ನು ಅಪಾಯದಿಂದ ರಕ್ಷಿಸುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಆರೆಸ್ಸೆಸ್ ಪ್ರತಿಪಾದಿಸಿದೆ ಎಂದು thehindu.com ವರದಿ ಮಾಡಿದೆ.

ವಿ. ರಾಮಸುಬ್ರಮಣಿಯನ್ ನೇತೃತ್ವದ ನ್ಯಾಯಪೀಠದೆದುರು ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, "ಪಥ ಸಂಚಲನಕ್ಕೆ ಇರುವ ಅಪಾಯದ ಕುರಿತ ಮಾಹಿತಿಯನ್ನು ಸಂಘಟನೆಯೊಂದಿಗೆ ಹಂಚಿಕೊಂಡು ಪಥ ಸಂಚಲನದ ಮಾರ್ಗದ ಕುರಿತು ಸಲಹೆ ನೀಡಲಾಗುವುದು" ಎಂದು ತಿಳಿಸಿದ್ದಾರೆ.

ಪಥ ಸಂಚಲನಕ್ಕೆ ಸಂಪೂರ್ಣ ನಿಷೇಧ ಹೇರಲು ಸರ್ಕಾರ ಬಯಸಿಲ್ಲ.‌ ಆದರೆ, ಈ ಹಿಂದೆ ಬಾಂಬ್ ಸ್ಫೋಟಕ್ಕೆ ಸಾಕ್ಷಿಯಾಗಿರುವ ಕೊಯಂಬತ್ತೂರಿನಂಥ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಸ್ತಿತ್ವ ಇರುವುದರಿಂದ ಪಥ ಸಂಚಲನದಲ್ಲಿ ಪಾಲ್ಗೊಳ್ಳುವವರಿಗೆ ಇರುವ ಭದ್ರತಾ ಆತಂಕದ ಕುರಿತಷ್ಟೆ ಬೆಳಕು ಚೆಲ್ಲುತ್ತಿದ್ದೇವೆ. ಪಥ ಸಂಚಲನ ಹಾಗೂ ಸಾರ್ವಜನಿಕ ಸಭೆಗಳನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತಿಲ್ಲ. ಆದರೆ, ಅದು ಎಲ್ಲ ಮಾರ್ಗ ಮತ್ತು ಮೊಹಲ್ಲಾಗಳಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮರು ನಿಗದಿಗೊಳಿಸಲಾಗಿದೆ.

ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಮದ್ರಾಸ್  ಹೈಕೋರ್ಟ್ ಏಕಸದಸ್ಯ ಪೀಠ ವಿಧಿಸಿದ್ದ ನಿಬಂಧನೆಗಳನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ನ್ಯಾ. ವಿ.ರಾಮಸುಬ್ರಮಣಿಯನ್ ನೇತೃತ್ವದ ನ್ಯಾಯಪೀಠ ನಡೆಸುತ್ತಿದೆ.

Similar News