ಇದುವರೆಗೆ ಡಿಫಾಲ್ಟ್ ಆಗಿಲ್ಲ, ಆಗುವುದೂ ಇಲ್ಲ: ಪಾಕ್ ವಿತ್ತಸಚಿವ

Update: 2023-03-03 17:52 GMT

ಇಸ್ಲಮಾಬಾದ್, ಮಾ.3: ಪಾಕಿಸ್ತಾನವು ಅಂತರಾಷ್ಟ್ರೀಯ ಸಂಸ್ಥೆಗಳ ಸಾಲ ಮರುಪಾವತಿಸದೆ ಡಿಫಾಲ್ಟರ್ ಪಟ್ಟಿಗೆ ಇದುವರೆಗೆ ಸೇರ್ಪಡೆಯಾಗಿಲ್ಲ, ಮುಂದೆ ಸೇರ್ಪಡೆಯಾಗುವುದೂ ಇಲ್ಲ ಎಂದು ಪಾಕಿಸ್ತಾನದ ವಿತ್ತಸಚಿವ ಇಷಾಕ್ ದಾರ್ ಶುಕ್ರವಾರ ಹೇಳಿದ್ದಾರೆ.

ದೇಶಕ್ಕೆ ಎದುರಾದ ಆರ್ಥಿಕ ದುಸ್ಥಿತಿಗೆ ಈ ಹಿಂದಿನ ಇಮ್ರಾನ್ ಖಾನ್ ಸರಕಾರ ಹೊಣೆ ಎಂಬ ಹೇಳಿಕೆಯನ್ನು ಪುನರುಚ್ಚರಿಸಿದ ಅವರು, ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ನೇತೃತ್ವದ ಸರಕಾರ ಪದಚ್ಯುತಗೊಂಡ ಸಂದರ್ಭದಲ್ಲಿ ಪ್ರಧಾನಿ ಶಹಬಾಝ್ ಶರೀಫ್ ನೇತೃತ್ವದ ಪ್ರಸ್ತುತ ಸರಕಾರವು ದೇಶದ ರಾಜಕೀಯ ವ್ಯವಸ್ಥೆಯ ಜೊತೆ ದೇಶವನ್ನು ರಕ್ಷಿಸುವ ತಾತ್ವಿಕ ನಿರ್ಧಾರವನ್ನು ಮಾಡಿತ್ತು ಎಂದರು.

ನಾವೀಗ ಅನಿಶ್ಚಿತ ಪರಿಸ್ಥಿತಿಯಲ್ಲಿ ಸಾಗುತ್ತಿರುವುದು ನಿಜ. ಆದರೆ ನಮ್ಮ ಸರಕಾರ ಪಾಕಿಸ್ತಾನದ ಹಿತಾಸಕ್ತಿಗೆ ಆದ್ಯತೆ ನೀಡುವುದನ್ನು ಮುಂದುವರಿಸಿದೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪದೇ ಪದೇ ದೇಶ ಡಿಫಾಲ್ಟರ್ ಪಟ್ಟಿಗೆ ಸೇರಲಿದೆ ಎಂದು ಹೇಳುವ ಮೂಲಕ ಐಎಂಎಫ್ನಿಂದ ಸಾಲ ಪಡೆಯುವ ಪ್ರಕ್ರಿಯೆಗೆ ತೊಡಕುಂಟು ಮಾಡುತ್ತಿದ್ದಾರೆ. ಅದರ ಬದಲು, ತಮ್ಮ ಸರಕಾರದ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆ ಅವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ದೇಶಕ್ಕೆ ಬಿಕ್ಕಟ್ಟು ಎದುರಾಗಿರುವಾಗ ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು, ಪರಿಸ್ಥಿತಿಯ ದುರ್ಲಾಬ ಪಡೆಯಲು ಪ್ರಯತ್ನಿಸುತ್ತಿದ್ದಾರೆ. 

ಈ ಹಿಂದಿನ ಸರಕಾರದ ಕೆಟ್ಟ ಆಡಳಿತ ಮತ್ತು ಆರ್ಥಿಕ ಅವ್ಯವಹಾರ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣ ಎಂದು ದಾರ್ ಪ್ರತಿಪಾದಿಸಿದ್ದಾರೆ. 2022ರ ವಿನಾಶಕಾರಿ ಪ್ರವಾಹವು ಪಾಕಿಸ್ತಾನದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಇದರಿಂದಾಗಿ ದೇಶಕ್ಕೆ ಸುಮಾರು 30 ಶತಕೋಟಿ ಡಾಲರ್ನಷ್ಟು ನಷ್ಟ ಸಂಭವಿಸಿದೆ ಎಂದವರು ಹೇಳಿದ್ದಾರೆ.

Similar News