ದೇಶದಲ್ಲಿ ಕೆಮ್ಮು, ಜ್ವರದ ಹಲವಾರು ಪ್ರಕರಣಗಳಿಗೆ Influenza A ವೈರಸ್ ಕಾರಣ: ಐಸಿಎಂಆರ್
ವಿವೇಚನೆಯಿಲ್ಲದೆ ಆ್ಯಂಟಿಬಯಾಟಿಕ್ ಗಳ ಬಳಕೆಯ ವಿರುದ್ಧ IMA ಎಚ್ಚರಿಕೆ
ಹೊಸದಿಲ್ಲಿ: ಕಳೆದ 2-3 ತಿಂಗಳುಗಳಿಂದ ಭಾರತದಲ್ಲಿ ಕಾಣಿಸಿಕೊಂಡಿರುವ, ಕೆಲವೊಮ್ಮೆ ಜ್ವರದ ಜೊತೆಗೆ ನಿರಂತರ ಕೆಮ್ಮಿನ ಪ್ರಕರಣಗಳಿಗೆ ಇನ್ಫ್ಲುಯೆಂಜಾ ಎ ಸಬ್ಟೈಪ್ ಎಚ್3ಎನ್2 (Influenza A subtype H3N2) ವೈರಸ್ ಕಾರಣವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯ ತಜ್ಞರು ಹೇಳಿದ್ದಾರೆ.
ಕಳೆದ 2-3 ತಿಂಗಳುಗಳಿಂದ ವ್ಯಾಪಕವಾಗಿ ಹರಿದಾಡುತ್ತಿರುವ ಎಚ್3ಎನ್2 ಇತರ ಯಾವುದೇ ಸಬ್ಟೈಪ್ಗಳಿಗಿಂತ ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಕಾರಣವಾಗುತ್ತಿದೆ ಎಂದು ತಿಳಿಸಿರುವ ತಜ್ಞರು, ವೈರಸ್ ಸೋಂಕಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ವಹಿಸಬೇಕಾದ ಮುಂಜಾಗ್ರತೆಗಳನ್ನು ಸೂಚಿಸಿದ್ದಾರೆ.
ಇನ್ನೊಂದೆಡೆ, ದೇಶಾದ್ಯಂತ ಹೆಚ್ಚುತ್ತಿರುವ ಕೆಮ್ಮು, ಶೀತ ಮತ್ತು ವಾಕರಿಕೆ ಪ್ರಕರಣಗಳ ನಡುವೆ ವಿವೇಚನೆಯಿಲ್ಲದೆ ಆ್ಯಂಟಿಬಯಾಟಿಕ್ ಗಳ ಬಳಕೆಯ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಎಚ್ಚರಿಕೆ ನೀಡಿದೆ.
ಜ್ವರವು ಮೂರು ದಿನಗಳ ಬಳಿಕ ಇರುವುದಿಲ್ಲ,ಆದರೆ ಕೆಮ್ಮು ಮೂರು ವಾರಗಳವರೆಗೆ ಮುಂದುವರಿಯಬಹುದು ಎಂದು ಐಎಂಎ ತಿಳಿಸಿದೆ.
ವಾಯುಮಾಲಿನ್ಯದಿಂದಾಗಿಯೂ ವೈರಸ್ ನ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿಸಿರುವ ಅದು, ಈ ಪ್ರಕರಣಗಳು ಹೆಚ್ಚಾಗಿ 15 ವರ್ಷಕ್ಕಿಂತ ಕೆಳಗಿನ ಮತ್ತು 50 ವರ್ಷಕ್ಕಿಂತ ಮೇಲಿನ ಜನರಲ್ಲಿ ಕಾಣಿಸಿಕೊಳ್ಳುತ್ತವೆ. ಜ್ವರದೊಂದಿಗೆ ಸೈನಸ್ ಗಳು ಮತ್ತು ಗಂಟಲು ಸೇರಿದಂತೆ ಉಸಿರಾಟ ವ್ಯವಸ್ಥೆಯ ಮೇಲ್ಭಾಗ ಸೋಂಕಿಗೆ ತುತ್ತಾಗುತ್ತದೆ ಎಂದಿದೆ.
ರೋಗಲಕ್ಷಣಗಳಿಗೆ ಮಾತ್ರ ಚಿಕಿತ್ಸೆಯನ್ನು ಶಿಫಾರಸು ಮಾಡುವಂತೆ ಮತ್ತು ಆ್ಯಂಟಿಬಯಾಟಿಕ್ಗಳನ್ನು ನೀಡದಂತೆ ಐಎಂಎ ವೈದ್ಯರಿಗೆ ಸೂಚಿಸಿದೆ.
ಜ್ವರ, ಕೆಮ್ಮು ಎಂದ ತಕ್ಷಣ ಜನರು ಅಝಿಥ್ರೋಮೈಸಿನ್ ಮತ್ತು ಅಮೊಕ್ಸಿಕ್ಲಾವ್ನಂತಹ ಆ್ಯಂಟಿಬಯಾಟಿಕ್ ಗಳನ್ನು ತೆಗೆದುಕೊಳ್ಳಲು ಆರಂಭಿಸುತ್ತಾರೆ. ಇದಕ್ಕಾಗಿ ಅವರು ವೈದ್ಯರ ಸಲಹೆಯನ್ನೂ ಪಡೆಯುವುದಿಲ್ಲ. ಸ್ಥಿತಿ ಉತ್ತಮವಾಗಿದೆ ಎಂದು ಅನ್ನಿಸಿದಾಗ ಆ್ಯಂಟಿಬಯಾಟಿಕ್ಗಳ ಸೇವನೆಯನ್ನು ನಿಲ್ಲಿಸುತ್ತಾರೆ. ಇದು ಆ್ಯಂಟಿಬಯಾಟಿಕ್ ಪ್ರತಿರೋಧಕತೆಗೆ ಕಾರಣವಾಗುವುದರಿಂದ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವ ಅಗತ್ಯವಿದೆ. ಏಕೆಂದರೆ ನಿಜವಾಗಿಯೂ ಆ್ಯಂಟಿಬಯಾಟಿಕ್ಗಳ ಅಗತ್ಯವಿದ್ದಾಗ ಪ್ರತಿರೋಧಕತೆಯಿಂದ ಅವು ಕೆಲಸ ಮಾಡುವುದಿಲ್ಲ ಎಂದು ಐಎಂಎ ಹೇಳಿಕೆಯಲ್ಲಿ ತಿಳಿಸಿದೆ.