×
Ad

ವಿಶ್ವದ ಅತ್ಯಂತ ಕಠಿಣ ಮ್ಯಾರಥಾನ್ 102 ಗಂಟೆಗಳಲ್ಲಿ ಮುಗಿಸಿ ದಾಖಲೆ ಬರೆದ ಭಾರತೀಯ

Update: 2023-03-06 16:21 IST

ಸಿಡ್ನಿ: ಹಲವರ ಪಾಲಿಗೆ ಅಸಾಧ್ಯವೆನಿಸಬಹುದಾದ ವಿಶ್ವದ ಅತ್ಯಂತ ಕಠಿಣ ಮ್ಯಾರಥಾನ್ ಅನ್ನು ಭಾರತೀಯ ಮೂಲದ 33 ವರ್ಷ ವಯಸ್ಸಿನ ಸುಕಾಂತ್ ಸಿಂಗ್ ಸುಕಿ ಎಂಬ ವ್ಯಕ್ತಿ ಪೂರೈಸಿ ವಿಶ್ವದ ಗಮನ ಸೆಳೆದಿದ್ದಾರೆ. ಅವರು ಆಸ್ಟ್ರೇಲಿಯಾದ ಡೆಲಿರಿಯಸ್ ಪಶ್ಚಿಮದಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್‌ನಲ್ಲಿ 350 ಕಿಮೀ ದೂರವನ್ನು 102 ಗಂಟೆ, 27 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಮ್ಯಾರಥಾನ್ ಫೆಬ್ರವರಿ 8, 2023ರಿಂದ ಫೆಬ್ರವರಿ 12, 2023ರವರೆಗೆ ಆಯೋಜನೆಗೊಂಡಿತ್ತು ಎಂದು ndtv.com ವರದಿ ಮಾಡಿದೆ.

ಮ್ಯಾರಥಾನ್ ಅನ್ನು ವೀರೋಚಿತವಾಗಿ ಪೂರೈಸಿರುವ ವಿಡಿಯೊವನ್ನು ಸುಕಿ ತಮ್ಮ ಯೂಟ್ಯೂಬ್ ವಾಹಿನಿಯಲ್ಲೂ ಪೋಸ್ಟ್ ಮಾಡಿದ್ದಾರೆ. ಮುಕ್ತಾಯದ ಗೆರೆಯ ಬಳಿ ನಿಂತಿರುವ ಜನರು, ಅವರನ್ನು ಹುರಿದುಂಬಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಮತ್ತೊಂದು ವಿಡಿಯೊದಲ್ಲಿ ತಮ್ಮ ಪಯಣ ಹಾಗೂ ಹೇಗೆ 350 ಕಿಮೀ ದೂರವನ್ನು ಕ್ರಮಿಸಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. "ಇದು ವಿಶ್ವದ ಅತ್ಯಂತ ಕಠಿಣ ಮ್ಯಾರಥಾನ್" ಎಂದು ಆ ವಿಡಿಯೊದಲ್ಲಿ ಸುಕಿ ಹೇಳಿದ್ದಾರೆ.

"2020ರಲ್ಲಿ 204 ಕಿಮೀ ಕ್ರಮಿಸುವ ಮೂಲಕ ಸುಕಿ ಈ ಬಾರಿಯ ಮ್ಯಾರಥಾನ್‌ಗೆ ಅರ್ಹತೆ ಪಡೆದಿದ್ದರು. ಕಳೆದ ಆರು ತಿಂಗಳಲ್ಲಿ ಸಾಕಷ್ಟು ತರಬೇತಿಯನ್ನೂ ಪಡೆದಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸುಕಿ, " ಆ ಸವಾಲನ್ನು ಪೂರೈಸುವ ಅಂತಿಮ ಹಂತದಲ್ಲಿ ನಾಲ್ಕು ಜನರಿದ್ದೆವು. ಆದರೆ, ನಾನು ಅದನ್ನು ಮುಗಿಸುವಲ್ಲಿ ಯಶಸ್ವಿಯಾದೆ" ಎಂದು ಹೇಳಿದ್ದಾರೆ.

2016ರಿಂದ ಸುಕಿ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದು, ಭಾರಿ ದೂರದ ಮ್ಯಾರಥಾನ್‌ಗಳು ನನ್ನ ಜೀವನಕ್ಕೆ ಹೊಸ ತಿರುವು ನೀಡಿದವು ಎಂದು 2020ರಲ್ಲಿ ಎಸ್‌ಬಿಎಸ್ ಹಿಂದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದನ್ನು ಓದಿ:  ಗರ್ಭದಲ್ಲಿರುವ ಶಿಶುಗಳಿಗೆ ಗೀತಾ, ರಾಮಾಯಣ ಪಾಠ ಕಲಿಸಲು ಆರೆಸ್ಸೆಸ್ ನಿಂದ 'ಗರ್ಭ ಸಂಸ್ಕಾರ' ಅಭಿಯಾನ

Similar News