ಕುಸಿದ ಬೆಲೆ: ಅಂಚೆ ಮೂಲಕ ಪ್ರಧಾನಿಗೆ ಈರುಳ್ಳಿ ಕಳುಹಿಸಿದ ರೈತರು

Update: 2023-03-07 02:58 GMT

ಮುಂಬೈ: ಕುಸಿಯುತ್ತಿರುವ ಈರುಳ್ಳಿ (Onion) ಬೆಲೆಗೆ ಪರಿಹಾರ ಹಾಗೂ ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಆಗ್ರಹಿಸಿ ಮಹಾರಾಷ್ಟ್ರದ ಅಹಮದ್‌ನಗರದ ರೈತರ ಗುಂಪೊಂದು ಅಂಚೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಈರುಳ್ಳಿಯನ್ನು ಕಳುಹಿಸಿ ಕೊಟ್ಟಿದೆ.

ಈರುಳ್ಳಿ ಸರಕನ್ನು ಪ್ರಧಾನಿಗೆ ಕಳಿಸಿಕೊಡಲಾಗಿದೆ ಎಂದು ಶೇತ್ಕಾರಿ ಸಂಘಟನಾ ಹಾಗೂ ಶೇತ್ಕಾರಿ ವಿಕಾಸ್ ಮಂಡಲ್‌ಗೆ ಸೇರಿದ ರೈತರು ಸೋಮವಾರ ತಿಳಿಸಿದ್ದಾರೆ.

"ಈರುಳ್ಳಿ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಇದರಿಂದ ರೈತರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯು ತೆರೆದುಕೊಳ್ಳಲಿದೆ. ಕಳೆದ ವರ್ಷ ತಮ್ಮ ಬೆಳೆಯನ್ನು ಮಾರಾಟ ಮಾಡಿರುವ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ ರೂ. 1,000 ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತೇವೆ" ಎಂದು ರೈತರೊಬ್ಬರು ಹೇಳಿದ್ದಾರೆ.

ಕೃಷಿಗಾಗಿ ಮಾಡುವ ವೆಚ್ಚ ಅತ್ಯಧಿಕವಾಗಿದೆ. ರೈತರು ರಸಗೊಬ್ಬರ, ಕೀಟನಾಶಕಗಳು, ಪೆಟ್ರೋಲ್ ಹಾಗೂ ಡೀಸೆಲ್‌ಗಳಿಗೆ ಜಾಗತಿಕ ಮಾರುಕಟ್ಟೆಗೆ ಅನುಸಾರವಾಗಿ ಪಾವತಿಸಬೇಕಿದೆ. ಹೀಗಿದ್ದೂ, ಮಾರಾಟದ ವಿಷಯಕ್ಕೆ ಬಂದಾಗ ನಾವು ಭಾರತೀಯ ದರಗಳಿಗೆ ಅನುಗುಣವಾಗಿ ಮಾರಾಟ ಮಾಡಬೇಕಾಗಿದೆ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ರಕ್ತದಲ್ಲಿ ಪತ್ರ ಬರೆದು ಬೆಳೆ ಹಾನಿ ಪರಿಶೀಲಿಸಲು ಬರುವಂತೆ ಮಹಾರಾಷ್ಟ್ರ ಸಿಎಂಗೆ ಆಮಂತ್ರಣ

Similar News