ಇರಾನ್ ನಲ್ಲಿ ಲಿಥಿಯಂನ ಬೃಹತ್ ನಿಕ್ಷೇಪ ಪತ್ತೆ
ಟೆಹ್ರಾನ್, ಮಾ.6: ದೇಶದಲ್ಲಿ ಲಿಥಿಯಂನ ಬೃಹತ್ ನಿಕ್ಷೇಪ ಪತ್ತೆಯಾಗಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ವಿದ್ಯುತ್ ವಾಹನಗಳು ಮತ್ತು ಆಧುನಿಕ ಎಲೆಕ್ಟ್ರಾನಿಕ್ಸ್ ಸಾಧನಗಳ ಬ್ಯಾಟರಿಗಳಲ್ಲಿನ ಪ್ರಮುಖ ಅಂಶವಾಗಿರುವ ಲಿಥಿಯಂನ ಬೃಹತ್ ನಿಕ್ಷೇಪ ಇರಾನ್‍ನಲ್ಲಿ ಇದೇ ಪ್ರಥಮವಾಗಿ ಹಮೆದಾನ್ ನಗರದಲ್ಲಿ ಪತ್ತೆಯಾಗಿದೆ ಎಂದು ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿ ಮುಹಮ್ಮದ್ ಹದಿ ಹೇಳಿದ್ದಾರೆ.
ಪಶ್ಚಿಮ ಇರಾನ್‍ನ ಹಮೆದಾನ್‍ನಲ್ಲಿ ಲಿಥಿಯಂ ನಿಕ್ಷೇಪದ ಆವಿಷ್ಕಾರದಿಂದ ವಿದ್ಯುತ್‍ಚಾಲಿತ ವಾಹನಗಳ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಒಂದು ಹೆಜ್ಜೆ ಇರಿಸಿದಂತಾಗಿದೆ ಎಂದವರು ಹೇಳಿದ್ದಾರೆ. ಇರಾನ್‍ನಲ್ಲಿ ಈಗಾಗಲೇ ತಾಮ್ರ, ಕಬ್ಬಿಣ, ತೈಲ ಇತ್ಯಾದಿ ನೈಸರ್ಗಿಕ ಸಂಪನ್ಮೂಲದ ನಿಕ್ಷೇಪ ಪತ್ತೆಯಾಗಿದೆ.
ತೈಲ ಆಧರಿತ ವಾಹನಗಳಿಂದ ಹೊರಸೂಸುವ ಹೊಗೆಯು ವಾಯುಮಾಲಿನ್ಯಕ್ಕೆ ಹಾಗೂ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವುದರಿಂದ ವಿದ್ಯುತ್‍ಚಾಲಿತ ವಾಹನಗಳ ಬಳಕೆಗೆ ವಿಶ್ವದಾದ್ಯಂತ ಆದ್ಯತೆ ನೀಡಲಾಗುತ್ತಿದೆ.