ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಆರು ತಿಂಗಳು ಹೆರಿಗೆ ರಜೆ !

Update: 2023-03-07 05:02 GMT

ತಿರುವನಂತಪುರಂ: ಹದಿನೆಂಟು ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ ಮಾಡಿ ಕೇರಳ ವಿಶ್ವವಿದ್ಯಾನಿಲಯ ಸೋಮವಾರ ಆದೇಶ ಹೊರಡಿಸಿದೆ. ಋತುಚಕ್ರದ ರಜೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಕನಿಷ್ಠ ಹಾಜರಾತಿ ಪ್ರಮಾಣವನ್ನು ಶೇಕಡ 73ಕ್ಕೆ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಂಡಿದೆ.

ಆರು ತಿಂಗಳ ವರೆಗೆ ಹೆರಿಗೆ ರಜೆ ಪಡೆದು ತೆರಳುವ ವಿದ್ಯಾರ್ಥಿನಿಯರು ಮತ್ತೆ ಪ್ರವೇಶ ಪಡೆಯದೇ ನೇರವಾಗಿ ತರಗತಿಗಳಿಗೆ ಹಾಜರಾಗಬಹುದು. ಈ ಸಂಬಂಧ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನಿರ್ಧಾರ ಕೈಗೊಂಡಿದೆ.

ವಿಶ್ವವಿದ್ಯಾನಿಲಯದ ಅನುಮೋದನೆ ಪಡೆಯದೇ ಮತ್ತೆ ಕಾಲೇಜು ತರಗತಿಗೆ ಸೇರಿಕೊಳ್ಳುವ ಮುನ್ನ, ಹೆರಿಗೆ ರಜೆಯ ಮೇಲೆ ತೆರಳಿದ ವಿದ್ಯಾರ್ಥಿನಿಯರ ವೈದ್ಯಕೀಯ ದಾಖಲೆಗಳನ್ನು ದೃಢಪಡಿಸುವುದು ಆಯಾ ಕಾಲೇಜು ಪ್ರಾಚಾರ್ಯರ ಜವಾಬ್ದಾರಿಯಾಗಿರುತ್ತದೆ ಎಂದು ಸಿಂಡಿಕೇಟ್ ಸ್ಪಷ್ಟಪಡಿಸಿದೆ.

Similar News