ದೇಶದ ಸಂಸ್ಥೆಗಳನ್ನೆಲ್ಲ ವಶಪಡಿಸಿಕೊಂಡ RSS ಪ್ರಜಾಸತ್ತಾತ್ಮಕ ಸ್ವರೂಪವನ್ನೇ ಬದಲಾಯಿಸಿದೆ: ರಾಹುಲ್‌ ಗಾಂಧಿ

Update: 2023-03-07 08:32 GMT

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ವನ್ನು "ಮೂಲಭೂತವಾದಿ, ಫ್ಯಾಸಿಸ್ಟ್ ಸಂಘಟನೆ" ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದು ದೇಶದ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಪ್ರಜಾಸತ್ತಾತ್ಮಕ ಸ್ಪರ್ಧೆಯ ಸ್ವರೂಪವನ್ನು ಬದಲಾಯಿಸಿದೆ ಎಂದು ಆರೋಪಿಸಿದರು. 

ಇಂಗ್ಲೆಂಡ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಸೋಮವಾರ ಸಂಜೆ ಲಂಡನ್ ನ ಚಾಥಮ್ ಹೌಸ್ ಥಿಂಕ್ ಟ್ಯಾಂಕ್ನಲ್ಲಿ ನಡೆದ ಸಂವಾದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ವಿದೇಶಿ ಪ್ರೇಕ್ಷಕರಿಗೆ ಆರೆಸ್ಸೆಸ್ ಬಗ್ಗೆ ವಿವರಣೆ ನೀಡುವಂತೆ ರಾಹುಲ್ ರಲ್ಲಿ  ಕೇಳಿದಾಗ: "ನೀವು ಅದನ್ನು ರಹಸ್ಯ ಸಮಾಜ (Secret Society) ಎಂದು ಕರೆಯಬಹುದು. ಇದನ್ನು ಮುಸ್ಲಿಂ ಬ್ರದರ್ಹುಡ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅಧಿಕಾರಕ್ಕೆ ಬರಲು ಪ್ರಜಾಪ್ರಭುತ್ವದ ವಿಚಾರಗಳನ್ನು ಬಳಸುವುದು ನಂತರ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದು ಅದರ ಆಲೋಚನೆಯಾಗಿದೆ’’ ಎಂದರು.

"ನಮ್ಮ ದೇಶದ ವಿವಿಧ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವಲ್ಲಿ ಅವರು ಎಷ್ಟು ಯಶಸ್ವಿಯಾಗಿದ್ದಾರೆ ಎಂಬುದು ನನಗೆ ಆಘಾತವನ್ನುಂಟು ಮಾಡಿದೆ. ಪತ್ರಿಕಾ ರಂಗ, ನ್ಯಾಯಾಂಗ, ಸಂಸತ್ತು, ಚುನಾವಣಾ ಆಯೋಗ  ಹೀಗೆ  ಎಲ್ಲಾ ಸಂಸ್ಥೆಗಳು ಒತ್ತಡದಲ್ಲಿವೆ, ಬೆದರಿಕೆಗೆ ಒಳಗಾಗುತ್ತವೆ ಹಾಗೂ ಒಂದಲ್ಲ ಒಂದು ರೀತಿಯಲ್ಲಿ ನಿಯಂತ್ರಿಸಲ್ಪಡುತ್ತವೆ’’ ಎಂದರು. 

ನೀವು ಸ್ವಾತಂತ್ರ್ಯದಿಂದ ಇಲ್ಲಿಯವರೆಗಿನ ಸಮಯವನ್ನು ನೋಡಿದರೆ, ಬಹುಪಾಲು ಸಮಯ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿತ್ತು. ಬಿಜೆಪಿ 10 ವರ್ಷಗಳ ಕಾಲ ಅಧಿಕಾರದಲ್ಲಿರುವುದಕ್ಕಿಂತ ಮೊದಲು, ನಾವು 10 ವರ್ಷ ಅಧಿಕಾರದಲ್ಲಿದ್ದೆವು. ಭಾರತದಲ್ಲಿ ತಾವು ಅಧಿಕಾರಕ್ಕೆ ಬಂದಿದ್ದೇವೆ ಮತ್ತು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತೇವೆ ಎಂದು ನಂಬಲು ಬಿಜೆಪಿ ಇಷ್ಟಪಡುತ್ತದೆ. ವಾಸ್ತವವಾಗಿ  ಹಾಗಲ್ಲ. ಭಾರತೀಯ ಪ್ರಜಾಪ್ರಭುತ್ವಕ್ಕಾಗಿ ಮಾಡಲೇಬೇಕಾದ "ದುರಸ್ತಿ ಕೆಲಸ" ಕ್ಕಾಗಿ ಪ್ರತಿಪಕ್ಷಗಳು ಒಗ್ಗೂಡಬಹುದು" ಅವರು ಹೇಳಿದ್ದಾರೆ.

ಇದನ್ನು ಓದಿ: ವಲಸೆ ಕಾರ್ಮಿಕರ ಕುರಿತು ಸುಳ್ಳುಸುದ್ದಿ ಪ್ರಸಾರ: ಬಲಪಂಥೀಯ Opindia ನ್ಯೂಸ್‌ ಪೋರ್ಟಲ್‌ ವಿರುದ್ಧ ಪ್ರಕರಣ ದಾಖಲು

Similar News