ರಾಹುಲ್‌ಗಾಂಧಿ ಫೋಟೊಗೆ ಬಿಜೆಪಿ ಸಚಿವ ಮೆಚ್ಚುಗೆ !

Update: 2023-03-08 02:19 GMT

ಗುವಾಹತಿ: ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಲಂಡನ್‌ನಲ್ಲಿ ನೀಡಿರುವ ಹೇಳಿಕೆ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿರುವ ಮಧ್ಯೆಯೇ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ನಾಗಾಲ್ಯಾಂಡ್ ಸಚಿವ ತೆಮ್‌ಜೆನ್ ಇಮ್ನಾ ಅಲೋಂಗ್, ಕಾಂಗ್ರೆಸ್ ಪಕ್ಷದ ಅಧಿಕೃತ ಹ್ಯಾಂಡಲ್ ಒಂದರಿಂದ ಪೋಸ್ಟ್ ಮಾಡಿದ ರಾಹುಲ್‌ಗಾಂಧಿಯವರ ಚಿತ್ರವನ್ನು ಮೆಚ್ಚಿಕೊಂಡಿದ್ದು, ಅಚ್ಚರಿ ಮೂಡಿಸಿದ್ದಾರೆ.

"ನೀವು ಯಾವುದರ ಮೇಲೆ ನಂಬಿಕೆ ಇಟ್ಟಿದ್ದೀರೊ ಅದಕ್ಕೆ ಅಚಲವಾಗಿರಿ; ನೀವು ಏಕಾಂಗಿಯಾಗಿದ್ದೂ ಕೂಡಾ" ಎಂದು ರಾಹುಲ್‌ಗಾಂಧಿಯವರ ಚಿತ್ರದ ಸಹಿತ ಟ್ವೀಟ್ ಮಾಡಲಾಗಿತ್ತು. ರಾಹುಲ್‌ಗಾಂಧಿ ಜೇಬಿನಲ್ಲಿ ಕೈ ಇರಿಸಿಕೊಂಡು ಸೂಟ್ ಧರಿಸಿರುವ ಚಿತ್ರ ಇದಾಗಿದೆ. ಲಂಡನ್‌ನ ಛತಮ್ ಹೌಸ್‌ನಲ್ಲಿ ಸಂವಾದದ ವೇಲೆ ಫೋಟೊಗೆ ರಾಹುಲ್ ಫೋಸ್ ನೀಡಿದ್ದರು.

ಬಿಜೆಪಿಯ ನಾಗಾಲ್ಯಾಂಡ್ ಮುಖ್ಯಸ್ಥರೂ ಆಗಿರುವ ಅಲೋಂಗ್, "ಈ ಚಿತ್ರ ಉತ್ತಮ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಆತ್ಮವಿಶ್ವಾಸ ಮತ್ತು ಭಂಗಿ ಮುಂದಿನ ಹಂತ" ಎಂದು ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಪೋಸ್ಟ್‌ಗಳಿಗೆ ತೆಮ್‌ಜೆನ್ ಹೆಸರುವಾಸಿ. ಸಚಿವರ ಈ ಹೇಳಿಕೆ ಪಕ್ಷದ ಅಭಿಮಾನಿಗಳಲ್ಲಿ ಇರಿಸು ಮುರಿಸಿಗೆ ಕಾರಣವಾಗಿದೆ.

ರಾಹುಲ್‌ಗಾಂಧಿಯವರ ಬ್ರಿಟನ್ ಭೇಟಿ ವಿವಾದದ ಕೇಂದ್ರ ಬಿಂದುವಾಗಿದ್ದು, ರಾಹುಲ್ ವಿದೇಶಿ ನೆಲದಲ್ಲಿ ಭಾರತಕ್ಕೆ ಮತ್ತು ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ. ವಿವಿಧ ಕಡೆಗಳಲ್ಲಿ ರಾಹುಲ್ ಭಾರತ, ಆರೆಸ್ಸೆಸ್ ಮತ್ತು ಭಾರ- ಚೀನಾ ಸಂಘರ್ಷದ ಬಗ್ಗೆ ಮಾತನಾಡಿದ್ದಾರೆ.

Similar News