39 ಡಿಗ್ರಿ ದಾಟಿದ ಮುಂಬೈ ತಾಪಮಾನ: ಕೆಂಡವಾದ ವಾಣಿಜ್ಯ ರಾಜಧಾನಿ

Update: 2023-03-08 04:36 GMT

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಸೋಮವಾರ ಅಕ್ಷರಶಃ ಕೆಂಡವಾಗಿದ್ದು, ದೇಶದಲ್ಲೇ ಗರಿಷ್ಠ ಅಂದರೆ 39.3 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ.

ಈ ಆಘಾತಕಾರಿ ಉಷ್ಣಾಂಶದಿಂದ ಬೆಂದ ಜನಕ್ಕೆ ಸಂಜೆಯ ವೇಳೆಗೆ ಮಳೆ, ಗುಡುಗು ಹಾಗೂ ಹಿತವಾದ ಗಾಳಿ ತಂಪೆರೆದಿದ್ದು, ಮಂಗಳವಾರ ತಾಪಮಾನ 35.8 ಡಿಗ್ರಿಗೆ ಇಳಿದಿದೆ. ಸೋಮವಾರದ ದೂಳುಸಹಿತ ಭಾರಿ ಗಾಳಿಯಿಂದಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳು ವಿಳಂಬವಾದವು. ಎಂಎಂಆರ್, ಗೋರೈ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಇದು ಮುಂಬೈ ಪ್ರದೇಶದಲ್ಲಿ ಕಳೆದ 17 ವರ್ಷಗಳಲ್ಲಿ ಮೊದಲ ಆಲೀಕಲ್ಲು ಮಳೆ ಎಂದು ತಜ್ಞರು ಹೇಳಿದ್ದಾರೆ.

2006ರ ಮಾರ್ಚ್ 9ರಂದು ಮುಂಬೈನಲ್ಲಿ ಮೊದಲ ಆಲೀಕಲ್ಲು ಮಳೆಯಾಗಿದ್ದು, ಸೋಮವಾರ ಈ ಪ್ರದೇಶ ದೇಶದಲ್ಲೇ ಗರಿಷ್ಠ ತಾಪಮಾನ ದಾಖಲಿಸಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆಯ ರಾಜೇಶ್ ಕಪಾಡಿಯಾ ತಿಳಿಸಿದ್ದಾರೆ. ಭಾನುವಾರ 38.1 ಡಿಗ್ರಿ ಸೆಲ್ಷಿಯಸ್ ಇದ್ದ ತಾಪಮಾನ ಸೋಮವಾರ 39.3 ಡಿಗ್ರಿಗೆ ಹೆಚ್ಚಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಬಲ ಪೂರ್ವಾಭಿಮುಖ ಮಾರುತ ಮತ್ತು ಸಮುದ್ರದ ಗಾಳಿ ವಿಳಂಬವಾಗಿರುವುದು ತಾಪಮಾನ ದಿಢೀರ್ ಏರಿಕೆಗೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸುಷ್ಮಾ ನಾಯರ್ ವಿಶ್ಲೇಷಿಸಿದ್ದಾರೆ. ಮುಂಬೈನಲ್ಲಿ ಇದುವರೆಗಿನ ಗರಿಷ್ಠ ತಾಪಮಾನ 41.6 ಡಿಗ್ರಿ ಸೆಲ್ಷಿಯಸ್ 2011ರ ಮಾರ್ಚ್ 17ರಂದು ದಾಖಲಾಗಿತ್ತು.

ಆದರೆ ಸೋಮವಾರ ಸಂಜೆಯಿಂದೀಚೆಗೆ ಹವಾಮಾನ ಬದಲಾಗಿದ್ದು, ಗುಡುಗು ಸಹಿತ ಮಳೆ ನಗರದ ಎಲ್ಲೆಡೆ ಬಿದ್ದಿದೆ. ಮಂಗಳವಾರ ಮೋಡ ಮುಸುಕಿದ ವಾತಾವರಣವಿದ್ದು, ಕೆಲವೆಡೆ ಮಳೆಯಾಗಿದೆ. ಮಾರ್ಚ್‍ನಲ್ಲಿ ಮುಂಬೈನಲ್ಲಿ ಮಳೆಯಾಗುವುದು ಅಸಹಜವಲ್ಲ. ಇದು ಮುಂಗಾರು ಪೂರ್ವ ಮಳೆ ಎಂದು ತಜ್ಞರು ಹೇಳಿದ್ದಾರೆ.

Similar News