ದಲಿತ ಮುನ್ಸಿಪಲ್ ಇಂಜಿನಿಯರ್ ಗೆ ಹಲ್ಲೆ, ಜಾತಿ ನಿಂದನೆ: ಹರ್ಯಾಣ ಸಚಿವರ ವಿರುದ್ಧ ಆರೋಪ
ಚಂಡಿಗಡ, ಮೇ 8: ಹರ್ಯಾಣದ ಅಭಿವೃದ್ಧಿ ಮತ್ತು ಪಂಚಾಯತ್ ಸಚಿವ ದೇವೇಂದ್ರ ಸಿಂಗ್ ಬಬ್ಲಿಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಜಾತಿ ನಿಂದನೆಯನ್ನು ಮಾಡಿದ್ದಾರೆ ಎಂದು ತೊಹಾನಾದ ದಲಿತ ಮುನ್ಸಿಪಲ್ ಇಂಜಿನಿಯರ್ ರಮಣದೀಪ್ ಆರೋಪಿಸಿದ್ದಾರೆ.
ಬಬ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗಾಗಿ ರಮಣದೀಪ್ ರನ್ನು ತೊಹಾನಾ ನಗರದ ಬಿದಾಯಿ ಖೇರಾದಲ್ಲಿರುವ ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
‘ಸ್ಥಳೀಯ ಗುತ್ತಿಗೆದಾರನೋರ್ವನಿಗೆ ಕೆಲವು ಬಿಲ್ ಗಳ ಹಣ ಬಿಡುಗಡೆಗೆ ನಾನು ನಿರಾಕರಿಸಿದ ಬಳಿಕ ಬಬ್ಲಿ ನಾನು ಕುಳಿತುಕೊಂಡಿದ್ದ ಖುರ್ಚಿಯನ್ನು ಒದ್ದಿದ್ದರು,ನನ್ನ ಮೇಲೆ ಹಲ್ಲೆ ನಡಸಿದ್ದರು,ನನ್ನ ಜಾತಿಯ ವ್ಯಕ್ತಿಯನ್ನು ಮುನ್ಸಿಪಲ್ ಇಂಜಿನಿಯರ್ ಆಗಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದರು,ಅವರು ನನ್ನ ವಿರುದ್ಧ ಬಳಸಿದ್ದ ನಿಂದನೆ ಪದಗಳನ್ನು ದೂರಿನಲ್ಲಿ ಬರೆಯಲು ನನಗೆ ಸಾಧ್ಯವಿಲ್ಲ ’ ಎಂದು ರಮಣದೀಪ್ ಫತೇಬಾದ್ ಜಿಲ್ಲಾ ಮುನ್ಸಿಪಲ್ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ವಿರುದ್ಧದ ಆರೋಪಗಳನ್ನು ಬಬ್ಲಿ ನಿರಾಕರಿಸಿದ್ದಾರೆ.
ನಿರ್ಮಾಣ ಕಾಮಗಾರಿಗಳಲ್ಲಿಯ ಲೋಪಗಳ ಕುರಿತು ತಾನು ಮಾತನಾಡುತ್ತಿದ್ದಾಗ ಸಚಿವರ ಸಹಾಯಕರಲ್ಲೋರ್ವ ಅವರನ್ನು ತನ್ನ ವಿರುದ್ಧ ಪ್ರಚೋದಿಸಿದ್ದ ಎಂದು ರಮಣದೀಪ್ ಆರೋಪಿಸಿದ್ದಾರೆ.
ತನಗೆ ಜೀವ ಬೆದರಿಕೆಯಿದೆ ಎಂದು ದೂರಿನಲ್ಲಿ ತಿಳಿಸಿರುವ ಅವರು,ತನ್ನನ್ನು ತೊಹಾನಾದಿಂದ ಹೊರಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. ತನ್ನ ವರ್ಗಾವಣೆಯಾಗುವವರೆಗೂ ಪ್ರತಿಭಟನೆ ಕ್ರಮವಾಗಿ ತಾನು ರಜೆಯಲ್ಲಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.
ಬಿಲ್ಗಳ ಪಾವತಿಗೆ ರಮಣದೀಪ್ ಲಂಚಕ್ಕೆ ಬೇಡಿಕೆಯಿರಿಸಿದ್ದರು ಎಂದು ತಿಳಿಸಿದ ಜನನಾಯಕ ಜನತಾ ಪಾರ್ಟಿಯ ಶಾಸಕರಾಗಿರುವ ಬಬ್ಲಿ,ತಾನು ತೊಹಾನಾದಿಂದ ಶಾಸಕನಾಗಿ ಆಯ್ಕೆಯಾಗುವ ಮುನ್ನ ಪರಿಸ್ಥಿತಿ ತುಂಬ ಕೆಟ್ಟದಾಗಿತ್ತು. ಲಂಚ ನೀಡದೆ ಕಡತಗಳನ್ನು ಮುಂದಕ್ಕೆ ಕಳುಹಿಸಲು ಕೆಲವು ಅಧಿಕಾರಿಗಳು ನಿರಾಕರಿಸಿದ್ದರು. ವ್ಯವಸ್ಥೆಯನ್ನು ಬದಲಿಸಲು ತಾನು ನಿರ್ಧರಿಸಿದ್ದೆ ಮತ್ತು ಈಗ ಇಂತಹ ಸುಳ್ಳು ಆರೋಪಗಳನ್ನು ಎದುರಿಸುತ್ತಿದ್ದೇನೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
ನಿರ್ಮಾಣ ಕಾಮಗಾರಿಗಳಲ್ಲಿಯ ಕೊರತೆಗಳ ಬಗ್ಗೆ ತನಗೆ ಅರಿವಿಲ್ಲ ಮತ್ತು ಅದನ್ನು ಎಂದಿಗೂ ತನ್ನ ಗಮನಕ್ಕೆ ತಂದಿರಲಿಲ್ಲ ಎಂದೂ ಅವರು ಹೇಳಿಕೊಂಡರು. ಕಳೆದ ತಿಂಗಳು ಹರ್ಯಾಣ ಸರಕಾರದ ನೂತನ ಇ-ಟೆಂಡರಿಂಗ್ ನೀತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮ ಮುಖ್ಯಸ್ಥರನ್ನು ಕಳ್ಳರು ಎಂದು ಕರೆಯುವ ಮೂಲಕ ಬಬ್ಲಿ ವಿವಾದವನ್ನು ಸೃಷ್ಟಿಸಿದ್ದರು.
ಬಬ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಜಯ ಸಿಂಗ್ ಚೌತಾಲಾ, ಅವರು ಬಳಸಿದ್ದ ಪದಗಳಿಗಾಗಿ ಅವರನ್ನು ಟೀಕಿಸಿದ್ದರು.