×
Ad

ಅಕ್ರಮ ವಲಸಿಗರಿಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗಂಭೀರ ಎಚ್ಚರಿಕೆ

Update: 2023-03-08 21:21 IST

ಹೊಸದಿಲ್ಲಿ,ಮಾ.8: ಅಕ್ರಮ ವಲಸಿಗರು ಬ್ರಿಟನ್ ಪ್ರವೇಶಿಸುವುದನ್ನು ತಡೆಯಲು ಬುಧವಾರ ವಿವಾದಾತ್ಮಕ ನೂತನ ಯೋಜನೆಯೊಂದನ್ನು ಪ್ರಕಟಿಸಿರುವ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು,ಅಕ್ರಮವಾಗಿ ಬ್ರಿಟನ್ ಪ್ರವೇಶಿಸುವವರಿಗೆ ರಾಜಕೀಯ ಆಶ್ರಯ ಕೋರಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

‘ನೀವಿಲ್ಲಿಗೆ ಅಕ್ರಮವಾಗಿ ಬಂದರೆ ನೀವು ರಾಜಕೀಯ ಆಶ್ರಯವನ್ನು ಕೋರುವಂತಿಲ್ಲ. ನಮ್ಮ ಆಧುನಿಕ ಗುಲಾಮಗಿರಿ ರಕ್ಷಣೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ನಕಲಿ ಮಾನವ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಮತ್ತು ನೀವು ಇಲ್ಲಿ ಉಳಿದುಕೊಳ್ಳುವುದೂ ಸಾಧ್ಯವಿಲ್ಲ ’ ಎಂದು ಸುನಕ್ ಟ್ವೀಟಿಸಿದ್ದಾರೆ.

‘ಇಲ್ಲಿಗೆ ಅಕ್ರಮವಾಗಿ ಬರುವವರನ್ನು ನಾವು ಬಂಧಿಸುತ್ತೇವೆ ಮತ್ತು ಕೆಲವೇ ವಾರಗಳಲ್ಲಿ ಅವರನ್ನು ಹೊರಕ್ಕೆ ಹಾಕುತ್ತೇವೆ. ನಿಮ್ಮ ಸ್ವಂತ ದೇಶ ನಿಮ್ಮ ಪಾಲಿಗೆ ಸುರಕ್ಷಿತವಾಗಿದ್ದರೆ ಅಲ್ಲಿಗೆ ಅಥವಾ ರುವಾಂಡಾದಂತಹ ಸುರಕ್ಷಿತ ಮೂರನೇ ದೇಶಕ್ಕೆ ನಿಮ್ಮನ್ನು ರವಾನಿಸುತ್ತೇವೆ. ಒಮ್ಮೆ ನಿಮ್ಮನ್ನು ಇಲ್ಲಿಂದ ಹೊರಹಾಕಿದ ಬಳಿಕ ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಮಾಡುವಂತೆ ನೀವು ಈ ದೇಶವನ್ನು ಎಂದಿಗೂ ಮರುಪ್ರವೇಶಿಸದಂತೆ ನಿಷೇಧಿಸಲಾಗುವುದು ’ಎಂದೂ ಸುನಕ್ ಹೇಳಿದ್ದಾರೆ.

ಇದಕ್ಕಾಗಿ ಕರಡು ‘ಅಕ್ರಮ ವಲಸೆ ಮಸೂದೆ ’ಯನ್ನು ರೂಪಿಸಲಾಗಿದ್ದು,ಇದರಡಿ ಸಣ್ಣ ಬೋಟ್ಗಳಲ್ಲಿ ಇಂಗ್ಲಿಷ್ ಕಾಲುವೆಯನ್ನು ದಾಟುವ ಅಕ್ರಮ ವಲಸಿಗರನ್ನು ನಿರ್ಬಂಧಿಸಲಾಗುವುದು.

ಕರಡು ಕಾನೂನಿನ ಅಡಿ ಒಳಾಡಳಿತ ಸಚಿವೆ ಸುಯೆಲ್ಲಾ ಬ್ರೇವರ್ಮನ್ ಅವರಿಗೆ ಹೊಸ ಕಾನೂನು ಜವಾಬ್ದಾರಿಯನ್ನು ನೀಡಲಾಗುವುದು. ಇಂಗ್ಲಿಷ್ ಕಾಲುವೆಯಂತಹ ಮಾರ್ಗಗಳ ಮೂಲಕ ಪ್ರವೇಶಿಸುವ ಎಲ್ಲ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ,ಬ್ರಿಟನ್ನಲ್ಲಿಯ ಮತ್ತು ಐರೋಪ್ಯ ಮಾನವ ಹಕ್ಕುಗಳ ಕಾನೂನಿನಡಿ ವಿವಿಧ ಹಕ್ಕುಗಳ ಲಾಭವನ್ನು ಪಡೆಯುವದರಿಂದ ಅವರನ್ನು ನಿರ್ಬಂಧಿಸುವ ಕೆಲಸವನ್ನು ಸುಯೆಲ್ಲಾ ಮಾಡಲಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಇದು ನೈತಿಕವೂ ಅಲ್ಲ,ಸುಸ್ಥಿರವೂ ಅಲ್ಲ. ಇದು ಮುಂದುವರಿಯಲು ಸಾಧ್ಯವಿಲ್ಲ ಎಂದು ಸುನಕ್ ಹೇಳಿದ್ದಾರೆ.

‘ನಮ್ಮ ನೆರವಿನ ತುಂಬ ಅಗತ್ಯವಿರುವವರಿಗೆ ಇದು ವಿನಾಶಕಾರಿ ಅನ್ಯಾಯ,ಏಕೆಂದರೆ ನಮ್ಮ ರಾಜಕೀಯ ವ್ಯವಸ್ಥೆಯು ಇಂಗ್ಲಿಷ್ ಕಾಲುವೆಯನ್ನು ದಾಟಿ ಅಕ್ರಮವಾಗಿ ಪ್ರವೇಶಿಸುವವರಿಂದ ತುಂಬಿರುವುದರಿಂದ ಅದನ್ನು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ’ ಎಂದೂ ಸುನಕ್ ಹೇಳಿದ್ದಾರೆ.

ಕಳೆದ ವರ್ಷ ಸಣ್ಣ ಬೋಟ್ಗಳ ಮೂಲಕ 45,000ಕ್ಕೂ ಅಧಿಕ ವಲಸಿಗರು ಆಗ್ನೇಯ ಇಂಗ್ಲಂಡ್ನ ಕರಾವಳಿಗಳನ್ನು ತಲುಪಿದ್ದಾರೆ. 2018ರಿಂದ ಈ ಕಳ್ಳಮಾರ್ಗ ಹೆಚ್ಚು ಜನಪ್ರಿಯವಾಗುತ್ತಿದ್ದು, ಅಕ್ರಮ ವಲಸಿಗರ ಸಂಖ್ಯೆಯಲ್ಲಿ ವಾರ್ಷಿಕ ಶೇ.60ರಷ್ಟು ಏರಿಕೆಯಾಗಿದೆ.

ನೂತನ ಕಾನೂನನ್ನು ಟೀಕಿಸಿರುವ ಮಾನವ ಹಕ್ಕು ಗುಂಪುಗಳು ಮತ್ತು ವಿರೋಧ ಪಕ್ಷಗಳು,ಯೋಜನೆಯು ನಿಷ್ಪರಿಣಾಮಕಾರಿಯಾಗಲಿದೆ ಮತ್ತು ಅನ್ಯಾಯವಾಗಿ ಅಸಹಾಯಕ ನಿರಾಶ್ರಿತರನ್ನು ಹರಕೆಯ ಕುರಿಗಳನ್ನಾಗಿಸುತ್ತದೆ ಎಂದು ಹೇಳಿದ್ದಾರೆ.

ರಾಜಕೀಯ ಆಶ್ರಯ ಕೋರಿದ್ದ ಕೆಲವರಿಗೆ ರುವಾಂಡಾದಲ್ಲಿ ನೆಲೆಗೊಳಿಸಲು ಕಾರ್ಯಕ್ರಮವನ್ನು ಕಳೆದ ವರ್ಷ ಜಾರಿಗೊಳಿಸುವ ಮೂಲಕ ವಲಸಿಗರ ಗಡಿಪಾರು ಕ್ರಮವನ್ನು ಅನುಷ್ಠಾನಿಸಲು ಬ್ರಿಟನ್ ಈಗಾಗಲೇ ಪ್ರಯತ್ನಿಸಿತ್ತು. ಆದರೆ ಕಳೆದ ವರ್ಷದ ಜೂನ್ನಲ್ಲಿ ಐರೋಪ್ಯ ಮಾನವ ಹಕ್ಕುಗಳ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಯೋಜನೆಯು ನನೆಗುದಿಗೆ ಬಿದ್ದ ಬಳಿಕ ಬ್ರಿಟನ್ನಿಂದ ರುವಾಂಡಾಕ್ಕೆ ಯಾವುದೇ ವಿಮಾನ ಹಾರಾಟ ನಡೆಸಿಲ್ಲ.

Similar News