ಸಿರಿಯಾ: ಡ್ರೋನ್ ದಾಳಿಯಲ್ಲಿ 4 ಮಂದಿ ಮೃತ್ಯು; 8 ಮಂದಿಗೆ ಗಾಯ
Update: 2023-03-08 21:38 IST
ಅಂಕಾರ, ಮಾ.8: ಪೂರ್ವ ಸಿರಿಯಾದಲ್ಲಿ ಸರಕಾರದ ಹಿಡಿತದಲ್ಲಿರುವ ಪ್ರದೇಶವನ್ನು ಗುರಿಯಾಗಿಸಿ ಬುಧವಾರ ನಡೆದ ಡ್ರೋನ್ ದಾಳಿಯಲ್ಲಿ 4 ಮಂದಿ ಮೃತಪಟ್ಟಿದ್ದು ಇತರ 8 ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಪೂರ್ವ ಇರಾನ್‍ನ ಡಿಯೆರ್‍ಎಝೋರ್ ನಗರದಲ್ಲಿ ಇರಾನ್ ಬೆಂಬಲಿತ(ಸಿರಿಯಾ ಸರಕಾರದ ಪಡೆಗಳ ಪರ) ಗುಂಪಿಗೆ ಸೇರಿದ ಶಸ್ತ್ರಾಸ್ತ್ರ ಕಾರ್ಖಾನೆಯ ಬಳಿ ಮತ್ತು ಶಸ್ತ್ರಾಸ್ತ್ರಗಳನ್ನು ತುಂಬಿದ ಟ್ರಕ್ ಬಳಿ ಡ್ರೋನ್ ದಾಳಿ ನಡೆದಿದೆ ಎಂದು ಮಾನವ ಹಕ್ಕುಗಳ ಸಿರಿಯಾ ವೀಕ್ಷಣಾ ಸಮಿತಿ ಹೇಳಿದೆ. ಈ ನಗರದಲ್ಲಿ ಇರಾನ್‍ನ ಉನ್ನತ ಕಮಾಂಡರ್ ಗಳು, ಲೆಬನಾನ್‍ನ ಹೆಝ್‍ಬುಲ್ಲಾ ಸಂಘಟನೆಯ ಹಿರಿಯ ಅಧಿಕಾರಿಗಳ ಕಚೇರಿಯಿದೆ. ಅಲ್ಲದೆ ಕಾಲರಾ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಆಸ್ಪತ್ರೆಯೂ ಇಲ್ಲಿದೆ. ಇರಾನ್ ಬೆಂಬಲಿತ ಗುಂಪು ಹಾಗೂ ಹಝ್‍ಬುಲ್ಲಾ ಸಂಘಟನೆಗಳು ಸಿರಿಯಾದ ಸರಕಾರಿ ಪಡೆಗಳ ಪರ ಹೋರಾಟ ನಡೆಸುತ್ತಿವೆ.