×
Ad

ಎಸ್‌ಐಓನಿಂದ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ

Update: 2023-03-08 21:46 IST

ಉಡುಪಿ: 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ ಯುವಜನರ ಕೆಲವು ಬೇಡಿಕೆಗಳನ್ನು ಸೇರಿಸುವಂತೆ ಹಾಗೂ ಈ ಹಕ್ಕೊತ್ತಾಯಗಳೇ ಯುವಜನರ ಮತಗಳನ್ನು ನಿರ್ಣಯಿಸುವಂತೆ ಜನಾಭಿಪ್ರಾಯ ರೂಪಿಸಲು ಎಸ್‌ಐಓ ಕರ್ನಾಟಕ ಮುಂದಾಗಿದ್ದು, ಇದಕ್ಕಾಗಿ ಸಿದ್ಧಪಡಿಸಿದ ವಿದ್ಯಾರ್ಥಿ ಪ್ರಣಾಳಿಕೆಯನ್ನು ಇಂದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿತು.

ಈ ಕುರಿತು ಮಾತನಾಡಿದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಅಫ್ವಾನ್,  ‘ದ್ವೇಷದ ರಾಜಕೀಯ ಸಾಕು... ಶಿಕ್ಷಣ, ಉದ್ಯೋಗ, ಸ್ನೇಹ, ಪ್ರೀತಿಯ ರಾಜಕಾರಣ ಬೇಕು’ ಎಂಬುದು ತಮ್ಮ ಅಭಿಯಾನದ ಧ್ಯೇಯವಾಕ್ಯವಾಗಿದೆ.  ಸಂವಿಧಾನಬದ್ಧವಾದ ಮೂಲಭೂತ ಹಕ್ಕಾದ ಶಿಕ್ಷಣ ಸರಕಾರದ ಸ್ವಾಮ್ಯದಿಂದ ದಿನೇ ದಿನೇ ದುರ್ಬಲಗೊಳ್ಳುತಿದ್ದು, ಸಂವಿಧಾನ ಖಾತರಿ ಪಡಿಸಿದ ಶಿಕ್ಷಣದ ಹಕ್ಕನ್ನು ಸಮರ್ಪಕವಾಗಿ ಜಾರಿ ಮಾಡಬೇಕೆಂಬುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದರು.

ವಿದ್ಯಾರ್ಥಿ ಪ್ರಣಾಳಿಕೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ, ಸಂಘಟನೆ ಶೀಘ್ರವೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳನ್ನು ಒತ್ತಾಯಿಸಿ ಮನವಿ ಅರ್ಪಿಸಲಾಗುವುದು. ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಅವುಗಳನ್ನು ಸೇರಿಸುವಂತೆ ಆಗ್ರಹಿಸಲಾಗುವುದು ಎಂದರು.

ಉಡುಪಿ ಜಿಲ್ಲೆಯ ನಮ್ಮ ಶೈಕ್ಷಣಿಕ ಬೇಡಿಕೆಗಳ ಕುರಿತು ಮಾತನಾಡಿದ  ಅಫ್ವನ್, ಬಹುಕಾಲದ ಬೇಡಿಕೆಯಾದ ಉಡುಪಿ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜನ್ನು (ಪಿಪಿಪಿ ಮಾದರಿ ಅಲ್ಲ) ಮಂಜೂರುಗೊಳಿಸಬೇಕು. ಜಿಲ್ಲೆಗೊಂದು ಸರಕಾರಿ ಇಂಜಿನಿಯರಿಂಗ್ ಕಾಲೇಜು ಬೇಕು. ಜಿಲ್ಲೆಯ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತಿದ್ದು, ಇವರನ್ನು ವ್ಯಸನದಿಂದ ಹೊರತರಲು ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕು. ಡ್ರಗ್ ಫ್ರಿ ಕ್ಯಾಂಪಸ್‌ಗಳನ್ನು ಜಾರಿಗೊಳಿಸಬೇಕು.

ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರಕಾರಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎಲ್ಲರಿಗೂ  ಅನ್ವಯಿ ಸುವಂತೆ ಕಾಮನ್ ಬಸ್‌ಪಾಸ್‌ನ ವ್ಯವಸ್ಥೆ ಜಾರಿಗೆ ತರಬೇಕು. ಎಂಡೋಸಲ್ಫಾನ್ ಸಂತ್ರಸ್ತರಿಗೆ ಅನುಕೂಲ ವಾಗುವಂತೆ ತಾಲೂಕು ಮಟ್ಟದಲ್ಲಿ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಉಡುಪಿ ಜಿಲ್ಲಾ ಅಧ್ಯಕ್ಷ ಅಯಾನ್ ಮಲ್ಪೆ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಡಾ.ಫಹೀಮ್ ಅಬ್ದುಲ್ಲಾ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ನಿಫಾಲ್ ಹೂಡೆ ಹಾಗೂ ವಸೀಂ ಹೂಡೆ ಉಪಸ್ಥಿತರಿದ್ದರು.

Similar News