ಒಂದು ನೀತಿ ಸಂಹಿತೆ

Update: 2023-03-08 19:30 GMT

ಅಖಂಡತೆಗೆ ಕರೆಕೊಟ್ಟು ವಿಭಜಕ ಶಕ್ತಿಗಳನ್ನು ಪ್ರೋತ್ಸಾಹಿಸುವುದು ಎರಡೂ ನೀತಿಯೇ. ಇವು ಅಗತ್ಯವೋ ಅನುಕೂಲವೋ ಅನಿವಾರ್ಯವೋ ಎಂದರೆ ಸಂದರ್ಭಕ್ಕೆ ಸಂಬಂಧಿಸಿದ್ದು. ಜಿ-20ರಲ್ಲಿ ಪ್ರಧಾನಿಗೆ ಅದು ನೀತಿ; ಇಲ್ಲಿ ಚುನಾವಣೆಗೋಸ್ಕರ ಧ್ರುವೀಕರಣಕ್ಕಾಗಿ ಇದು ನೀತಿ. ಯಾರನ್ನು ಅತ್ಯಂತ ಭ್ರಷ್ಟರೆಂದು ಗೃಹಮಂತ್ರಿ ಈಚೆಗೆ ಈಶಾನ್ಯ ರಾಜ್ಯಗಳ ಚುನಾವಣೆಯ ಮೊದಲು ಪುಂಖಾನುಪುಂಖವಾಗಿ ಜನರಿಗೆ ಹೇಳುತ್ತ ಹೋದರೋ ಅವರೊಂದಿಗೇ ಈಗ ಸರಕಾರ. ಇದು ನೀತಿ. ಆದ್ದರಿಂದ ನೀತಿಯೆಂಬ ಪದವನ್ನು ಮಣ್ಣಿನ ಮುದ್ದ್‌ಯಂತಿಟ್ಟುಕೊಂಡ ನಮಗೆ ಬೇಕಾದ ಮೂರ್ತಿಯನ್ನು ಬೇಕಾದ ಆಕಾರ, ಸ್ವರೂಪದಲ್ಲಿ ಮಾಡುವುದು ಅದನ್ನು ಮಾರುಕಟ್ಟೆಗೊಯ್ದು ನಮ್ಮ ಕಿಸೆ ತುಂಬಿಸಿಕೊಳ್ಳುವುದೇ ಸದ್ಯದ ನೀತಿ.


ನಮ್ಮ ಪ್ರಧಾನಿಯವರು ಜಿ-20 ಸಮ್ಮೇಳನದಲ್ಲಿ ದೇಶ-ದೇಶದೊಳಗಣ, ಮನುಷ್ಯ-ಮನುಷ್ಯರೊಳಗಣ, ಮನಸ್ಸು-ಮನಸ್ಸುಗಳೊಳಗಣ ವೈಷಮ್ಯ, ವಿಭಜನೆಯನ್ನು ವಿರೋಧಿಸುತ್ತ ಎಲ್ಲರೂ ಒಂದಾಗಿ ಬಾಳಬೇಕೆಂದು ಹೇಳುವಾಗ ಆಗುವ ಸಂತಸ ಅಷ್ಟಿಷ್ಟಲ್ಲ. ವಿಶ್ವಶಾಂತಿ, ಏಶ್ಯಖಂಡದ ಶಾಂತಿ, ಭಾರತದಲ್ಲಿನ ಶಾಂತಿ, ಹಾಗೆಯೇ ನಮ್ಮ ನಡುವಿನ ಶಾಂತಿ ಎಲ್ಲವೂ ಮರಳಿ ಸ್ಥಾಪನೆಯಾಗುತ್ತದೆಂಬ ನಂಬಿಕೆ ಹುಟ್ಟುತ್ತದೆ. ಭಾರತವು ವಿಶ್ವಗುರುವಾಗುವುದಕ್ಕೆ ಇನ್ನೊಂದೇ ಮೆಟ್ಟಲು, ರಶ್ಯ-ಉಕ್ರೇನಿನ ಯುದ್ಧ ಭಾರತದ ಮಧ್ಯಸ್ಥಿಕೆಯಿಂದ ಇನ್ನೇನು ಮುಗಿಯಿತು ಅನ್ನಿಸುತ್ತದೆ. ನಾವು ಕನಸಿನಲ್ಲಿದ್ದೇವೋ ಕನಸು ನಮ್ಮಿಳಿದೆಯೋ ಗೊತ್ತಿಲ್ಲ. ಆದರೆ ಇವೆಲ್ಲ ಹುಸಿಯಾಗುವುದಕ್ಕೆ ಒಂದು ಕ್ಷಣವೂ ಬೇಕಾಗುವುದಿಲ್ಲ. ಜಿ-20 ಸಮ್ಮೇಳನದ ಕೊನೆಯಲ್ಲೇ ಇದಕ್ಕೆ ಉತ್ತರವಿತ್ತು. ಸದಸ್ಯರಾಷ್ಟ್ರಗಳು ಒಂದು ಘೋಷಣೆಗೆ ಬರಲು ಅಸಮರ್ಥವಾದವು. ಮೈಲುಗಟ್ಟಲೆ ಭಾಷಣಗಳೆಲ್ಲ ಆಕಾಶದಲ್ಲಿ ಮರೆಯಾದವು. ಮತ್ತೆ ಅದೇ ಹಳೆಯ ರಾಗ: ಭಾರತ-ಪಾಕಿಸ್ಥಾನ, ಭಾರತ-ಚೀನಾ, ಅಮೆರಿಕ-ರಶ್ಯ, ಹೀಗೆಲ್ಲ. ಭಾರತದೊಳಗೇ ಶಾಂತಿಯ ಪಾಠ ಕೇಳಲು ಬೇಕಾದಷ್ಟು ವಿದ್ಯಾರ್ಥಿಗಳಿಲ್ಲ. ಹಾಜರಾತಿಯೇ ಇಲ್ಲ. ದಿನಬೆಳಗಾದರೆ ಯಾವುದೇ ಕ್ಷೇತ್ರದ ಕುರಿತ ವಾರ್ತೆಯಲ್ಲೂ ಒಳ್ಳೆಯದು ಕಾಣದು. ಹಿಂಸೆ, ಅನ್ಯಾಯ ಇವೇ ಮುಖವಾರ್ತೆಗಳು. ಇವೆಲ್ಲ ಸರಿಯೇ ಎಂಬ ಪ್ರಶ್ನೆ ಉದ್ಭವಿಸಿ ಉತ್ತರ ಗೊತ್ತಿದ್ದರೂ ಉತ್ತರಿಸಲಾಗದೆ ಸುಮ್ಮನಿರುತ್ತೇವೆ. ಹಾಲಿಗೆ ಬಂದವನಿಗೆ ಎಮ್ಮೆಯ ಕ್ರಯ ಯಾಕೆ? ನಾವಿಲ್ಲಿ ಒಂದಷ್ಟು ವರ್ಷಗಳ ಬಾಳ್ವೆಗಾಗಿ ಹುಟ್ಟಿಬಂದಿದ್ದೇವೆ, ಅದನ್ನು ಪೂರೈಸಿ ಇಲ್ಲವಾಗುತ್ತೇವೆ ಎಂಬ ತಾತ್ವಿಕತೆಗೆ ಶರಣಾಗಿ ನೈತಿಕತೆಯನ್ನು ಉಲ್ಲೇಖಿಸದೆ ನಮ್ಮ ಪಾಡಿಗೆ ನಾವಿರುತ್ತೇವೆ. ಹೀಗಲ್ಲದೆ ಯಾವುದು ಸರಿ/ನೀತಿ, ಯಾವುದು ತಪ್ಪು/ಅನೀತಿ ಎಂದು ಹೇಳಹೊರಟವರ ಸ್ಥಿತಿ ದಯನೀಯವಾಗುತ್ತ ಹೋಗುತ್ತದೆ.

ಭ್ರಷ್ಟಾಚಾರ ನೀತಿಯಲ್ಲವೆಂಬುದು ಗೊತ್ತಿದೆ. ಹಾಗೆಂದು ಭ್ರಷ್ಟನೊಬ್ಬನ ಕುರಿತು ಜನತೆ ತಳೆಯುವ ಧೋರಣೆ ನೋಡುವಾಗ ಭ್ರಷ್ಟಾಚಾರ ನೀತಿಯಲ್ಲವೆಂದು ಯಾರು ಹೇಳಬಹುದು? ಈ ಲೇಖನ ಬರುವ ಹೊತ್ತಿಗೆ ಭ್ರಷ್ಟಾಚಾರದ ಆರೋಪ ಹೊತ್ತ ಜನಪ್ರತಿನಿಧಿ ರಾಜಕಾರಣಿಯೊಬ್ಬ ನಿರೀಕ್ಷಣಾ ಜಾಮೀನು ಪಡೆದು ಭಾರತರತ್ನವೋ ಕರ್ನಾಟಕರತ್ನವೋ ಅಂತೂ ಯಾವುದೋ ಒಂದು ಜನಸನ್ಮಾನದ ದೊಡ್ಡ ಸಾಧನೆಯನ್ನು ಮಾಡಿದವರಂತೆ ಮೆರವಣಿಗೆಗೊಂಡನೆಂಬ ಸುದ್ದಿಯನ್ನು ನೋಡಿದಾಗ ಮೌಲ್ಯಗಳೆಲ್ಲ ತಿರುಗಾಮುರುಗಾ ಆಗುತ್ತಿದೆಯೆಂದೇ ನಂಬಬೇಕಾಗುತ್ತದೆ. ಕೆಲವು ವಾರಗಳ ಹಿಂದೆ ಗುಜರಾತಿನಲ್ಲಿ ಅತ್ಯಾಚಾರದ ಆರೋಪಿಗಳು ಆಳುವವರ ಕೃಪಾಕಟಾಕ್ಷದಿಂದ ಜೈಲಿನಿಂದ ಹೊರಬಂದಾಗ ಅವರನ್ನು ಆರತಿ ಎತ್ತಿ, ಹಾರ ಹಾಕಿ ಸ್ವಾಗತಿಸಲಾಗಿತ್ತು. ಕೆಲವರಿಗೆ ನಿಮಿಷಾರ್ಧದಲ್ಲಿ ಜಾಮೀನು ಸಿಕ್ಕಿದರೆ ಇನ್ನುಳಿದವರಿಗೆ ವರ್ಷಾನುಗಟ್ಟಲೆ ಜಾಮೀನು ಸಿಕ್ಕುವುದಿಲ್ಲ. ಇಂತಹ ವೈರುಧ್ಯಗಳಿಗೆ ಮೌನಸಾಕ್ಷಿಯಾಗುವ ಸಮಾಜವಿರುವಾಗ ಮೌಲ್ಯ ಪ್ರತಿಪಾದನೆಯಂತಹ ಸವಾಲಿಗೆ ತಲೆಕೊಡುವವರಿರಲಿಕ್ಕಿಲ್ಲ; ಇದ್ದರೂ ವಿರಳ.

ಇವೆಲ್ಲವನ್ನು ಗಮನಿಸುತ್ತ ನೀತಿಯೆಂದರೆ ಹೊಸ ವ್ಯಾಖ್ಯಾನವನ್ನು ಮಾಡು ವುದು ಅನಿವಾರ್ಯವೆಂದು ತಿಳಿಯಬೇಕಾಗುತ್ತದೆ. ಮಾಧ್ಯಮದವನೊಬ್ಬ ವೃದ್ಧರಲ್ಲಿ ‘‘ಇವೆಲ್ಲ ಸರಿಯೇ?’’ ಎಂದು ಕೇಳಿದಾಗ ‘‘ಆತ ನಮ್ಮ ಮಾತು ಯಾರು ಕೇಳುತ್ತಾರೆ?’’ ಎಂದು ವಿಷಣ್ಣವದನದಿಂದ ಹೇಳುತ್ತಿದ್ದ. ನೀತಿಯ ಕುರಿತಾಗಿ ಹೇಳುವಾಗ ಅದೊಂದು ಇರಬೇಕಾದ ಸದ್ಗುಣ ವೆಂಬರ್ಥದಲ್ಲೇ ಮಾತನಾಡುತ್ತೇವೆ. ಅದಕ್ಕೆ ಷರತ್ತುಗಳಿಲ್ಲ. ಸಚ್ಚಾರಿತ್ರ್ಯವೆಂಬಂತೆ. ನೀತಿಯೆಂದರೆ ಸರಿಯಾದ್ದು ಎಂಬ ಸಾರ. ನೀತಿವಂತ ಎಂದರೆ ಸಜ್ಜನ ಮತ್ತು ನುಡಿದಂತೆ ನಡೆವವನು ಎಂದು ತಿಳಿಯುತ್ತೇವೆ. ನೀತಿಯ ಹೊರತಾದ್ದೆಲ್ಲ ಅನೀತಿಯಾಗುತ್ತದೆ ಅಥವಾ ಆಗಬೇಕು. ಆದರೆ ಯಾರನ್ನೂ ಅನೀತಿವಂತ ಎಂದು ಹೇಳುವುದಿಲ್ಲ. ಪ್ರಾಯ: ಅದೊಂದು ಗುಣವಲ್ಲ; ಗುಣದ ಅಭಾವವೆಂಬ ಅರಿವಿನಿಂದ ಅದನ್ನು ಒಂದು ಮೌಲ್ಯವಾಗಿ ಪರಿಗಣಿಸುವುದಿಲ್ಲ. ಇದು ಸರಿಯೇ ಎಂಬುದಕ್ಕೆ ಕವಿ ‘ನೀತಿಯೇ ಕರುಣಾಳು..’ ಎಂದು ಅಥವಾ ಸತ್ಯಕ್ಕೆ ಮುಖಮಾಡಿಯೂ ಮೌನವಾದರೆ ‘ಸುಮ್ಮನಿಹುದು ನೀತಿಯೇ ನಿನಗೆ?’ ಎಂದು ಹೇಳುತ್ತಾನೆ. ಅಂತಹ ಸಂದರ್ಭದಲ್ಲಿ ನೀತಿವಂತನು ಅನೀತಿವಂತನಾಗುವುದಿಲ್ಲ. ಬದಲಾಗಿ ದೇವರಿಗಾದರೆ ಮಾಯೆ, ಮನುಷ್ಯನಿಗಾದರೆ ಸಮ್ಮೋಹನದ ಮಂಪರಿನ ಸ್ಥಿತಿ. ನಮ್ಮ ನೀತಿ ಸಂಹಿತೆ ಹೇಗಿದೆಯೆಂದರೆ ಅಧಿಕಾರಕ್ಕೆ ಬರಲು ಮೆಟ್ಟಲುಗಳನ್ನು ಕಡೆದಂತೆ. ಯಾವುದು ನಮ್ಮನ್ನು ಅಧಿಕಾರಕ್ಕೆ ತರಬಲ್ಲುದೋ ಅದು ನೀತಿ. ಉಳಿದವು? ಅವು ಅನೀತಿ. ಈ ತರ್ಕದ ಕೊನೆಯಲ್ಲಿ ನಾನೊಬ್ಬನೇ ನೀತಿವಂತ ಮತ್ತು ನನ್ನನ್ನು ಒಪ್ಪದವರೆಲ್ಲ ಅನೀತಿವಂತರಾಗುತ್ತಾರೆ. ನೀತಿಕಥೆಗಳನ್ನು ಕೇಳಿದ್ದುಂಟು.

ಅಲ್ಲಿ ಚಾಣಾಕ್ಷನೊಬ್ಬ ಗೆಲ್ಲುವುದು, ಅಮಾಯಕನೊಬ್ಬ ಮೋಸಗೊಳ್ಳುವುದು, ಅದೃಷ್ಟವಂತನೊಬ್ಬ ಸುಖಪಡುವುದು ಇವೆಲ್ಲ ಇವೆ. ತರ್ಕವನ್ನು ಬಾಧಿಸದ ಪರಿಣಾಮಗಳೇ ನೀತಿಯನ್ನು ನಿರ್ಧರಿಸುತ್ತವೆ ಎಂದು ಅನ್ನಿಸುತ್ತದೆ. ನಮ್ಮ ನಡುವೆ ಅನಿವಾರ್ಯವಾದ ಬದುಕೆಂದರೆ ಆಳ್ವಿಕೆ. ಒಂದಾನೊಂದು ಕಾಲದಲ್ಲಿ ಇದಕ್ಕಾಗಿ ರಾಜನೊಬ್ಬನಿದ್ದ. ಅವನೇ ಕಾಲಕ್ಕೆ ಕಾರಣ. ಅವನೇ ಪ್ರತ್ಯಕ್ಷ ದೇವರು. ಅವನೇ ನ್ಯಾಯದೇವತೆ. ಆಳಿಸಿಕೊಳ್ಳುವವರಿಗೆ ಅಸ್ಮಿತೆಯೂ ಇಲ್ಲ; ನಿಲುವೇ ಇಲ್ಲ. ಕೊನೆಗೂ ಅವರಿಗೆ ರಾಜಾ ಪರಮೋ ಧರ್ಮ ಆಗುತ್ತಾನೆ. ರಾಜಧರ್ಮವೆಂದು ಹೇಳುವ ಒಂದು ಮೌಲ್ಯವನ್ನು ಆ ಕಾಲದ ಸಮಾಜದಲ್ಲೂ ಕಲ್ಪಿಸಲಾಗುತ್ತಿತ್ತು. ಆದರೆ ಇದರಡಿ ಆಳುವವರ್ಯಾರೂ ಸಿಲುಕಿ ಬೀಳಲಾರರು. ಚರಿತ್ರೆಯ ಯಾವುದೇ ಪುಟದಲ್ಲೂ ವಾಡಿಕೆಯ ತೋಳ-ಕುರಿಮರಿಯ ಕಥೆ ಬೆಳೆದು ಬರುತ್ತದೆಯೇ ಹೊರತು ಕುರಿಮರಿ ಪಾರಾದ, ತೋಳ ಬಲಿಯಾದ ಕಥೆಗಳಿಲ್ಲ. ಅಂಥ ಸಂದರ್ಭವೇ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಆಳುವವರೇ ನೀತಿಯ ಮೌಲ್ಯವನ್ನು ನಿರ್ಧರಿಸುವವರು. ಬಲಿಪಶುವಿನ ಭಾವನೆಗಳಿಗನುಗುಣವಾಗಿ ಮೌಲ್ಯವನ್ನು ನಿರ್ಧರಿಸವವರು ಯಾರು? ಆದರೂ ಆ ಕಾಲದಲ್ಲಿ ವಿವೇಕವನ್ನು ಗೌರವಿಸುವಷ್ಟು ಶೀಲವಂತಿಕೆ ಆಳುವವರಲ್ಲಿ ಕೆಲವರಲ್ಲದರೂ ಇತ್ತು. ಮನುಷ್ಯನ ಯೋಗ್ಯತೆಯನ್ನು ನಿರ್ಧರಿಸಿ ಅವರನ್ನು ಪುರಸ್ಕರಿಸಲಾಗುತ್ತಿತ್ತು. ತಾರತಮ್ಯ ಧೋರಣೆ ಇರಲಿಲ್ಲವೇ? ಇತ್ತು. ಅವೆಲ್ಲ ಬರಲಿರುವ ಅನುಕೂಲಗಳಿಗೆ ಮುನ್ನುಡಿಯಾಗಿರುವ ತಂತ್ರಗಾರಿಕೆಯಂತಿತ್ತು. ಕರ್ಣನ ವಿರುದ್ಧ, ಏಕಲವ್ಯನ ವಿರುದ್ಧ ಅರ್ಜುನನನ್ನು ಬೆಳೆಸುವುದಕ್ಕೂ ಒಂದು ರಾಜನೀತಿಯೆಂಬ ತಂತ್ರವಿತ್ತು.

ಪುರಾಣಗಳ, ಚರಿತ್ರೆಗಳ ಯಾವುದೇ ಉಲ್ಲೇಖಗಳನ್ನು ಪರಿಶೀಲಿಸಿದರೆ ಕಾರ್ಯ-ಕಾರಣದ ನಡುವೆ ಒಂದು ಒಳಸುಳಿಯಿರುತ್ತಿತ್ತು. ರಾಮಾಯಣವಾದರೂ ಇಷ್ಟೇ; ಭಾರತವಾದರೂ ಇಷ್ಟೇ. ಯಾವ ಪುರಾಣ ಪಾತ್ರವಾದರೂ ಇಷ್ಟೇ. ಈ ನೀತಿಗೆ ಬಲಿಯಾದವರ ಪರವಾಗಿ ಯಾರೂ ಪುರಾಣವನ್ನಾಗಲೀ ಚರಿತ್ರೆಯನ್ನಾಗಲೀ ಬರೆಯಲಿಲ್ಲ. ಬರೆದಿದ್ದರೆ ಪುರಾಣಗಳ, ಚರಿತ್ರೆಯ ಪ್ರಸಂಗಗಳ ಕೊನೆ ಬೇರೆಯೇ ಇರುತ್ತಿತ್ತು. ಅರ್ಬುಧನ ಪರವಾಗಿ ಕಥೆ ಬರೆದಿದ್ದರೆ ಪುಣ್ಯಕೋಟಿಯು ಹುಲಿಯ ಆಹಾರವಾದ ಒಂದು ಸಾದಾ ದನವಾಗಿರುತ್ತಿತ್ತು. ಸಿಂಹವು ಕಥೆ ಬರೆಯುವ ತನಕ ಬೇಟೆಗಾರನೇ ನಾಯಕನಾಗಿರುತ್ತಾನೆ. ಬದಲಾದ ಚರಿತ್ರೆಯಲ್ಲಿ ಮಾತ್ರ ಆತ ಖಳನಾಯಕನಾಗಬಹುದು. ಆಧುನಿಕ ಯುಗ ಬೆಳೆದಂತೆಲ್ಲ ಮೌಲ್ಯವಲ್ಲದ್ದಕ್ಕೆಲ್ಲ ಮೌಲ್ಯಗಳು ಲಭಿಸುತ್ತವೆ. ಭಾಷೆ ಬೆಳೆದಂತೆಲ್ಲ ನೀತಿಗೂ ಅಪಾಯಕಾರಿ ತಿರುವುಗಳು, ಕೋಡುಗಳು ಬಂದಿವೆ. ನಾವೀಗ ದ್ವಂದ್ವನೀತಿ, ಇಬ್ಬಗೆಯ ನೀತಿ, ಇವನ್ನೆಲ್ಲ ಕೇಳುತ್ತೇವೆ. ನೀತಿ ಆಯೋಗವೆಂಬುದಿದೆ. ನೀತಿಗೂ ಅದಕ್ಕೂ ಏನು ಸಂಬಂಧವೆಂದು ಯಾರೂ ಹೇಳಲಾರರು. ಅದು ಹೇಳುವ ನೀತಿಯೆಂದರೆ ಸರಕಾರದ ಧೋರಣೆಗಳು. ಅವೆಲ್ಲ ರಾಜಕೀಯ ಅನುಕೂಲದವು. ಅದನ್ನು ಹಿಂದೆ ‘ರಾಜನೀತಿ’ ಎನ್ನುತ್ತಿದ್ದರು. ಈಗ ಅದೇ ಪದವು ಮುಂದುವರಿದಿದೆಯಾದರೂ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ದ್ವಂದ್ವನೀತಿ ಎಂದರೇನು? ಇಬ್ಬಗೆಯ ನೀತಿ ಎಂದರೇನು? ಎರಡು ರೀತಿಯಲ್ಲಿ ವರ್ತಿಸುವವನು. ಇವನ್ನು ನೀತಿಯೆಂದು ಹೇಳುವುದು ಒಂದು ಪಲಾಯನವಾದ ಅಥವಾ ಅವಕಾಶವಾದ. ಒಂದು ನೀತಿಯಾದರೆ ಇನ್ನೊಂದು ಅನೀತಿಯಾಗಬೇಕು. ಆದರೆ ನಮ್ಮ ಸಾಮಾಜಿಕ ಮತ್ತು ಲೌಕಿಕ ಜೀವನವು ಎಷ್ಟೊಂದು ಪೊಳ್ಳಾಗಿದೆಯೆಂದರೆ ನಾವು ಎಲ್ಲವನ್ನೂ ನೀತಿಯೆಂದು ಹೇಳುವ ಸ್ಥಿತಿಗೆ ಬಂದಿದ್ದೇವೆ.

ಒಂದು ಸಣ್ಣ ಉದಾಹರಣೆಯನ್ನು ಹೇಳುವುದಾದರೆ ನಮ್ಮ ಸಂವಿಧಾನದ ನಾಲ್ಕನೇ ಪರಿಚ್ಛೇದದಲ್ಲಿ ರಾಜ್ಯಾಂಗ ನೀತಿಯ ನಿರ್ದೇಶಕ ತತ್ವಗಳು ಎಂಬ ವಿವರಗಳಿವೆ. 36ನೇ ವಿಧಿಯಿಂದ 51ನೇ ವಿಧಿಯ ವರೆಗೆ ವಿಸ್ತರಿಸಿಕೊಂಡ ಈ ಅಧ್ಯಾಯದಲ್ಲಿ ಅಳವಡಿಸಿಕೊಳ್ಳಬಲ್ಲ, ಪಾಲಿಸಬಲ್ಲ ಏನನ್ನೂ ಹೇಳಿಲ್ಲವೆಂದು ಅನ್ನಿಸುತ್ತಿದೆ. 36ನೇ ವಿಧಿಯಲ್ಲಿ ನಿರೂಪಣೆ ಎಂಬ ವಿವರಗಳಲ್ಲಿ ಇರುವುದು ಇಷ್ಟೇ: ಸಂದರ್ಭವು ಇತರ ಅರ್ಥವನ್ನು ಬಯಸದೇ ಇದ್ದಲ್ಲಿ ‘ರಾಜ್ಯ’ ಎಂದರೆ ಮೂರನೇ ಪರಿಚ್ಛೇದದಲ್ಲಿ ನೀಡಲಾದ ಅರ್ಥವನ್ನೇ ಹೊಂದಿದೆ ಎಂದು ನಮೂದಿಸಿದೆ. ಇಷ್ಟನ್ನು ಹೇಳುವುದಕ್ಕೆ ಒಂದು ವಿಧಿಯ ಅಗತ್ಯವಿತ್ತೇ ಎಂದು ಅನ್ನಿಸಿದರೆ ಅದು ವಾಸ್ತವಿಕ. ಏಕೆಂದರೆ ಮೂರನೇ ಪರಿಚ್ಛೇದದ ಮೊದಲಿಗೆ ಅಂದರೆ 12ನೇ ವಿಧಿಯಲ್ಲಿ ಮತ್ತೆ ಸಂದರ್ಭವು ಇತರ ಅರ್ಥವನ್ನು ಬಯಸದೇ ಇದ್ದಲ್ಲಿ ‘ರಾಜ್ಯ’ ಎಂದರೆ ಮತ್ತು ಇಂಡಿಯಾ ಸರಕಾರ ಮತ್ತು ಸಂಸತ್ತು ಹಾಗೂ ಆಯಾಯ ರಾಜ್ಯಸರಕಾರಗಳು ಮತ್ತು ಅವುಗಳ ಶಾಸಕಾಂಗ ಹಾಗೂ ಇಂಡಿಯಾದ ಪ್ರಾದೇಶಿಕ ವ್ಯಾಪ್ತಿಯ ಮತ್ತು ಇಂಡಿಯಾದ ಸರಕಾರದ ನಿಯಂತ್ರಣದಲ್ಲಿರುವ ಇತರ ಸ್ಥಳೀಯ ಪ್ರಾಧಿಕಾರಗಳನ್ನೊಳಗೊಂಡಿದೆಯೆಂದು ಹೇಳಲಾಗಿದೆ. ಈ ನಿರೂಪಣೆಯಿದ್ದ ಮೇಲೆ ಮತ್ತೆ 36ನೇ ವಿಧಿಯನ್ನು ತುರುಕುವ ಅಗತ್ಯವೇನಿತ್ತು? ಹೇಗೂ ಇರಲಿ ಇದು ಆಳುವವರ ನೀತಿಯೆಂದು ಸಂಭಾಳಿಸಿಕೊಳ್ಳಬಹುದು. ಆದರೆ ಮುಖ್ಯ ಪ್ರಶ್ನೆ ಇದಲ್ಲ: 37ನೇ ವಿಧಿಯಲ್ಲಿ ಈ ನಿರ್ದೇಶಕ ತತ್ವಗಳನ್ನು ಯಾವ ನ್ಯಾಯಾಲಯವೂ ಹೇರಲು ಸಾಧ್ಯವಿಲ್ಲವೆಂದು ಮತ್ತು ಸರಕಾರವು ಕಾನೂನುಗಳನ್ನು ರಚಿಸುವಾಗ ಇವನ್ನು ಅನುಸರಿಸಬೇಕೆಂದು/ಅನ್ವಯಿಸಬೇಕೆಂದು ಹೇಳಿದೆ.

ಇದೇ ಪರಿಚ್ಛೇದದಲ್ಲಿ ಜನಹಿತದ ಕುರಿತು, ಹಲವಾರು ಮಾಡಬಲ್ಲ ವಿಚಾರಗಳನ್ನು ಹೇಳಿದೆ. ಅವುಗಳಲ್ಲಿ ಪಾನನಿಷೇಧವೂ ಒಂದು. ಆದರೆ ಆಳುವ ನೀತಿ ಹೇಗಿದೆಯೆಂದರೆ ಒಂದೆಡೆ ಇಂತಹ ವಿಧಿಗಳು, ಇನ್ನೊಂದೆಡೆ ಸಾರಾಯಿನೀತಿ! ಯಾವುದೇ ಕೆಟ್ಟ ವಿಚಾರವನ್ನೂ ಹತ್ತಿಕ್ಕಬೇಕಾದ ಸರಕಾರ ಪಾನಮತ್ತರಿಗೆ ಜೆಂಪು ಹಾಸನ್ನು ಹಾಕಿ ಹಣಸಂಪಾದಿಸುತ್ತದೆ. ಜೊತೆಗೇ ಪಾನಸಂಯಮ, ಪಾನನಿಷೇಧ ಮಂಡಳಿಗಳನ್ನು ರಚಿಸುತ್ತದೆ. ತಂಬಾಕು, ಮತ್ತಿತರ ಹಾನಿಕಾರಕ ವಸ್ತುಗಳ ವಿಚಾರದಲ್ಲೂ ಹೀಗೆಯೇ. ಅವುಗಳನ್ನು ಪ್ರೋತ್ಸಾಹಿಸುತ್ತಲೇ ಅವುಗಳನ್ನು ನಿಯಂತ್ರಿಸಲು ಕರೆಕೊಡುತ್ತದೆ. ರಾಸಾಯನಿಕಗಳನ್ನು ಪ್ರಚಾರ ಮಾಡಿ ದೇಶದೆಲ್ಲೆಡೆ ವ್ಯಾಪಿಸಿ ಆನಂತರ ಅವುಗಳ ಬಳಕೆಯನ್ನು ಕಡಿಮೆಮಾಡುವಂತೆ ಮತ್ತು ರಾಸಾಯನಿಕ ಮುಕ್ತ ವಸ್ತುಗಳನ್ನು ಬಳಸುವಂತೆ ಕರೆಕೊಡುತ್ತದೆ. ಪ್ಲಾಸ್ಟಿಕ್‌ಗಳನ್ನು ಪ್ರೋತ್ಸಾಹಿಸಿದ ಸರಕಾರವೇ ಈಗ ಅದರ ಬಳಕೆಯನ್ನು ನಿರ್ಬಂಧಿಸುತ್ತಿದೆ. ಆದರೆ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿರ್ಬಂಧಿಸಿಲ್ಲ. ಇಂತಹ ಹತ್ತಾರು ವಿಚಾರಗಳಲ್ಲಿ ಸರಕಾರದ ‘ನೀತಿ’ಯಿದೆ. ಇದನ್ನು ನಾವು ‘ದ್ವಂದ್ವ/ಇಬ್ಬಗೆಯ’ ನೀತಿ ಎನ್ನುತ್ತೇವೆ. ನೀತಿಗೆ ಪರ್ಯಾಯವಾಗಿ ಅಥವಾ ವಿರುದ್ಧವಾಗಿರುವುದು ಅನೀತಿಯೊಂದೇ. ಅಂತಹ ಸಂದರ್ಭದಲ್ಲಿ ಇವೆರಡೂ ನೀತಿ ಹೇಗಾದಾವು?

ಆಳುವವರ ಧೋರಣೆಯನ್ನು ‘ನೀತಿ’ಯೆಂದು ಅರ್ಥವಿಸಲಾಗಿದೆ. ಇದು ನೀತಿ ಹೇಗಾಗುತ್ತದೆಯೆಂಬುದು ಜಿಜ್ಞಾಸಾರ್ಹ. ಅಂದರೆ ನಾವು ದೊಡ್ಡ ಮತ್ತು ಮಹತ್ವದ ಮೌಲ್ಯಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳುತ್ತೇವೆ. ಇವೆರಡೂ ನೀತಿಗಳೇ. ಒಂದು ದೊಡ್ಡದು; ಇನ್ನೊಂದು ನಗಣ್ಯವಾದದ್ದು. ನಿಮ್ಮ ಆಯ್ಕೆ. ಸೃಷ್ಟಿಯೂ ನೀತಿಯೇ. ಲಯವೂ ನೀತಿಯೇ. ನಿರ್ಮಾಣವೂ ನೀತಿಯೇ; ನಿರ್ನಾಮವೂ ನೀತಿಯೇ. ಕೊನೆಗೆ ನಡೆ-ನುಡಿಯ ನಡುವಣ ಅಂತರವನ್ನು ಹೇಳುವಾಗಲೂ ಎರಡೂ ನೀತಿಯೇ ಎಂಬ ಹಂತಕ್ಕೆ ತಲುಪುತ್ತೇವೆ.

ಮತ್ತೆ ಮೊದಲಿಗೆ ತಲುಪುವುದು ಹೀಗೆಯೇ. ಅಖಂಡತೆಗೆ ಕರೆಕೊಟ್ಟು ವಿಭಜಕ ಶಕ್ತಿಗಳನ್ನು ಪ್ರೋತ್ಸಾಹಿಸುವುದು ಎರಡೂ ನೀತಿಯೇ. ಇವು ಅಗತ್ಯವೋ ಅನುಕೂಲವೋ ಅನಿವಾರ್ಯವೋ ಎಂದರೆ ಸಂದರ್ಭಕ್ಕೆ ಸಂಬಂಧಿಸಿದ್ದು. ಜಿ-20ರಲ್ಲಿ ಪ್ರಧಾನಿಗೆ ಅದು ನೀತಿ; ಇಲ್ಲಿ ಚುನಾವಣೆಗೋಸ್ಕರ ಧ್ರುವೀಕರಣಕ್ಕಾಗಿ ಇದು ನೀತಿ. ಯಾರನ್ನು ಅತ್ಯಂತ ಭ್ರಷ್ಟರೆಂದು ಗೃಹಮಂತ್ರಿ ಈಚೆಗೆ ಈಶಾನ್ಯ ರಾಜ್ಯಗಳ ಚುನಾವಣೆಯ ಮೊದಲು ಪುಂಖಾನುಪುಂಖವಾಗಿ ಜನರಿಗೆ ಹೇಳುತ್ತ ಹೋದರೋ ಅವರೊಂದಿಗೇ ಈಗ ಸರಕಾರ. ಇದು ನೀತಿ. ಆದ್ದರಿಂದ ನೀತಿಯೆಂಬ ಪದವನ್ನು ಮಣ್ಣಿನ ಮುದ್ದ್‌ಯಂತಿಟ್ಟುಕೊಂಡ ನಮಗೆ ಬೇಕಾದ ಮೂರ್ತಿಯನ್ನು ಬೇಕಾದ ಆಕಾರ, ಸ್ವರೂಪದಲ್ಲಿ ಮಾಡುವುದು ಅದನ್ನು ಮಾರುಕಟ್ಟೆಗೊಯ್ದು ನಮ್ಮ ಕಿಸೆ ತುಂಬಿಸಿಕೊಳ್ಳುವುದೇ ಸದ್ಯದ ನೀತಿ.

Similar News