ಪಕ್ಷ ತೊರೆದ ತಮಿಳುನಾಡು ಬಿಜೆಪಿಯ 13 ಪದಾಧಿಕಾರಿಗಳು

Update: 2023-03-09 05:56 GMT

ಚೆನ್ನೈ: ಮಾಹಿತಿ ತಂತ್ರಜ್ಞಾನ ಘಟಕದ ಪದಾಧಿಕಾರಿ ಸೇರಿದಂತೆ ಒಟ್ಟು 13 ಮಂದಿ ಪದಾಧಿಕಾರಿಗಳು ಕೇಸರಿ ಪಾಳಯವನ್ನು ತೊರೆದಿದ್ದು, ಬಿಜೆಪಿಯಲ್ಲಿನ ಪಕ್ಷ ತ್ಯಾಗ ಪರ್ವ ಮುಂದುವರಿದಿದೆ. ಪಶ್ಚಿಮ ಚೆನ್ನೈ ಬಿಜೆಪಿಯ (BJP) ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಓರತಿ ಅನ್ಬರಸು ಸೇರಿದಂತೆ 13 ಮಂದಿ ಪದಾಧಿಕಾರಿಗಳು ಬಿಜೆಪಿಯನ್ನು ತೊರೆದಿದ್ದು, ಪಕ್ಷ ತೊರೆದರೂ ನಾವು ಆಡಳಿತಾರೂಢ ಡಿಎಂಕೆ ಪಕ್ಷ ಸೇರ್ಪಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಇದಕ್ಕೂ ಮುನ್ನ ಬಿಜೆಪಿ ತೊರೆದು ಎಐಎಡಿಎಂಕೆ ಪಕ್ಷ ಸೇರ್ಪಡೆಯಾಗಿದ್ದ ರಾಜ್ಯ ಬಿಜೆಪಿ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಸಿ.ಟಿ.ಆರ್.ನಿರ್ಮಲ್ ಕುಮಾರ್ ಅವರ ರಾಜಕೀಯ ಮಾರ್ಗವನ್ನೇ ಉಳಿದವರೂ ಅನುಸರಿಸಲಿದ್ದಾರೆ ಎಂದು ವರದಿಯಾಗಿದೆ.

ಇದಲ್ಲದೆ, ಇತರ ಮತ್ತಿಬ್ಬರು ಬಿಜೆಪಿ ಪದಾಧಿಕಾರಿಗಳು ಪಕ್ಷ ತೊರೆದು ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸೇರ್ಪಡೆಯಾಗಿದ್ದು, ಇದು ಎರಡು ಮೈತ್ರಿ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಪಕ್ಷತ್ಯಾಗದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅನ್ಬರಸು, ನಾನು ಬಿಜೆಪಿಯಲ್ಲಿ ದೀರ್ಘಕಾಲ ಇದ್ದೆ ಹಾಗೂ ಪಕ್ಷದಲ್ಲಿನ ಪಿತೂರಿಗಳಿಗೆ ಬಲಿಯಾಗಲು ಇಚ್ಛಿಸದ ಕಾರಣ ಪಕ್ಷ ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ನಡುವೆ ಕೊಯಂಬತ್ತೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (K Annamalai), ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಇತರೆ ಪಕ್ಷಗಳು ನಿಕಟವಾಗಿ ಗಮನಿಸುತ್ತಿರುವುದರಿಂದ ಪಕ್ಷದ ಎರಡನೆ ಅಥವಾ ಮೂರನೆ ಹಂತದ ನಾಯಕರು ಪಕ್ಷ ತೊರೆಯುತ್ತಿರುವುದು ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

"ಮೂರು ತಿಂಗಳ ನಂತರ ಕೆಲವು ಹಿರಿಯ ನಾಯಕರು ಬಿಜೆಪಿ ತೊರೆದರೆ, ಇತರ ಪಕ್ಷಗಳ ಕೆಲವು ಹಿರಿಯ ನಾಯಕರು ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ" ಎಂದೂ ಅವರು ಹೇಳಿದ್ದಾರೆ.

ನಾನು ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆಯೇ ಹೊರತು ನನ್ನ ಹೆಸರಿನ ಹಿಂದೆ ಶಾಸಕ ಅಥವಾ ಸಂಸದ ಎಂಬ ಪಟ್ಟಿಯನ್ನು ಅಂಟಿಸಿಕೊಳ್ಳಲಲ್ಲ ಎಂದು ಕೆ.ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಾರತ ಕಳೆದ 10 ವರ್ಷಗಳಲ್ಲಿ ಅತ್ಯಂತ ಕೆಟ್ಟ ನಿರಂಕುಶ ಪ್ರಭುತ್ವಗಳಲ್ಲಿ ಒಂದಾಗಿದೆ: ವರದಿ

Similar News