×
Ad

ಜಯಲಲಿತಾಗೆ ಯಾರನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ: ಅಣ್ಣಾಮಲೈಗೆ ತಿರುಗೇಟು ನೀಡಿದ ಎಐಎಡಿಎಂಕೆ ನಾಯಕ

ತಾನು ಜಯಲಲಿತಾ, ಕರುಣಾನಿಧಿಯಂಥ ನಾಯಕ ಎಂದಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ

Update: 2023-03-09 12:06 IST

ಚೆನ್ನೈ: ನಾನು ಜಯಲಲಿತಾ (Jayalalithaa) ಹಾಗೂ ಕರುಣಾನಿಧಿಯಂಥ (M Karunanidhi) ನಾಯಕನಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ ಎಂದು ಮಂಗಳವಾರ ಹೇಳಿಕೆ ನೀಡಿದ್ದ ತಮಿಳುನಾಡು ಬಿಜೆಪಿ (BJP) ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈಗೆ (K Annamalai) ತಿರುಗೇಟು ನೀಡಿರುವ ಎಐಎಡಿಎಂಕೆ (AIADMK) ಮಾಜಿ ಸಚಿವ ಜಯಕುಮಾರ್ (D Jayakumar), ಜಯಲಲಿತಾರಿಗೆ ಹೋಲಿಕೆ ಇಲ್ಲ ಎಂದು ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.

ಬುಧವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಜಯಕುಮಾರ್, "ಅಣ್ಣಾಮಲೈ ತಮಗನ್ನಿಸಿದ್ದನ್ನು ಮಾತನಾಡಬಹುದು. ಆದರೆ, ಅಮ್ಮ(ಜಯಲಲಿತಾ)ರಂತಹ ಮೇರು ನಾಯಕಿಗೆ ತನ್ನನ್ನು ಹೋಲಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಹಾಗೆ ಹೇಳಲು ಯಾರಿಗೂ ಅಧಿಕಾರವಿಲ್ಲ. ಅಮ್ಮನಂತಹ ನಾಯಕಿ ಮತ್ತೆ ಹುಟ್ಟಲು ಸಾಧ್ಯವಿಲ್ಲ. ಆಕೆಯಂತೆ ಆಡಳಿತದ ಮೇಲೆ ಹಿಡಿತ ಹೊಂದಿರುವವರು ಮತ್ತೊಬ್ಬರಿಲ್ಲ. ಆಕೆ ಜಗತ್ತಿನಾದ್ಯಂತ ಇರುವ ತಮಿಳರ ಹೃದಯಗಳಲ್ಲಿರುವ ನಾಯಕಿ. ಮೀಸೆ ಇರುವವರೆಲ್ಲ ಕಟ್ಟಾಬೊಮ್ಮನ್ ಆಗಲು ಸಾಧ್ಯವಿಲ್ಲ" ಎಂದೂ ಲೇವಡಿ ಮಾಡಿದ್ದಾರೆ.

ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಇ.ಕೆ.ಪಳನಿಸ್ವಾಮಿ ನೇತೃತ್ವದಲ್ಲಿ ಪಕ್ಷದ ಜನಪ್ರಿಯತೆ ರಾಜ್ಯದಾದ್ಯಂತ ವ್ಯಾಪಿಸುತ್ತಿದ್ದು, ಜನರು ಸ್ವಯಂಪ್ರೇರಿತವಾಗಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಅಣ್ಣಾಮಲೈ ಸೇರಿದಂತೆ ಇತರ ನಾಯಕರು ರಾಜಕೀಯದಲ್ಲಿ ಅದನ್ನು ಸ್ವೀಕರಿಸುವ ಪ್ರೌಢತೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಬಿಜೆಪಿ ತೊರೆದಿದ್ದ ಕೆಲವು ಕಾರ್ಯಕರ್ತರನ್ನು ಎಐಎಡಿಎಂಕೆ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದರಿಂದ ವಿಚಲಿತರಾದ ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವು ವ್ಯಕ್ತಿಗಳು, ಕೆಲ ದಿನಗಳ ಹಿಂದೆ ತೂತುಕ್ಕುಡಿಯಲ್ಲಿ ಇ.ಕೆ.ಪಳನಿಸ್ವಾಮಿ ಅವರ ಪ್ರತಿಕೃತಿಯನ್ನು ದಹಿಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಇದರ ಬೆನ್ನಿಗೇ ಎಐಎಡಿಎಂಕೆ ನಾಯಕ ಜಯಕುಮಾರ್, ಒಂದು ಕಾಲದ ತಮ್ಮ ಮಿತ್ರಪಕ್ಷವಾದ ಬಿಜೆಪಿ ವಿರುದ್ಧ ಹರಿಹಾಯ್ದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಚುನಾವಣಾ ಹೊಸ್ತಿಲಲ್ಲೇ ‘ದಲಿತರ’ ರೇಷನ್ ಕಾರ್ಡ್ ಮಾಹಿತಿ ಸಂಗ್ರಹಿಸಿದ ಸರಕಾರ

Similar News