ಮಾಜಿ ಸಿಎಂ ಪಳನಿಸ್ವಾಮಿ ಭಾವಚಿತ್ರ ಸುಟ್ಟು ಮೈತ್ರಿ ಧರ್ಮ ಉಲ್ಲಂಘಿಸಿದ್ದಾರೆಂದು ಬಿಜೆಪಿ ಕಾರ್ಯಕರ್ತರ ಆಕ್ರೋಶ
ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಯಲ್ಲಿ ಮಹಾ ಬಿರುಕು
ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ನಡುವಿನ ಮೈತ್ರಿಯಲ್ಲಿ ಮಹಾ ಬಿರುಕು ಕಾಣಿಸಿಕೊಂಡಿದೆ. ಟ್ಯುಟಿಕೋರಿನ್‌ನಲ್ಲಿರುವ ಬಿಜೆಪಿ ಕಾರ್ಯಕರ್ತರು ಎಐಎಡಿಎಂಕೆ ಮುಖ್ಯಸ್ಥ ಇ. ಪಳನಿಸ್ವಾಮಿ (AIADMK chief E Palaniswami)ಯವರ ಫೋಟೋಗಳನ್ನು ಸುಟ್ಟುಹಾಕಿದ್ದು, ಪಳನಿಸ್ವಾಮಿ "ಒಕ್ಕೂಟದ ಧರ್ಮ" ವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಕಳೆದ ವಾರ, ಐವರು ಬಿಜೆಪಿ ನಾಯಕರು ಎಐಎಡಿಎಂಕೆಗೆ ಸೇರ್ಪಡೆಯಾದರು. ಅವರಲ್ಲಿ ಬಿಜೆಪಿಯ ರಾಜ್ಯ ಐಟಿ ವಿಂಗ್ ಚೀಫ್ ಸಿಆರ್ ಟಿ ನಿರ್ಮಲ್ ಕುಮಾರ್ ಕೂಡ ಇದ್ದರು. ಬುಧವಾರ ಇತರ 13 ಬಿಜೆಪಿ ಪದಾಧಿಕಾರಿಗಳು ಸಿಟಿಆರ್ ನಿರ್ಮಲ್ ಕುಮಾರ್ ಅವರನ್ನು ಬೆಂಬಲಿಸಿ ಪಕ್ಷವನ್ನು ತೊರೆದಿದ್ದರು.
ಕುಮಾರ್ ಅವರು ಬಿಜೆಪಿ ಪಕ್ಷವನ್ನು ತೊರೆದು ರವಿವಾರವೇ ಎಐಎಡಿಎಂಕೆ ಸೇರಿಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಡಿಎಂಕೆ ಸಚಿವರೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕುಮಾರ್ ಆರೋಪಿಸಿದರು.
2019 ರ ಲೋಕಸಭಾ ಚುನಾವಣೆಯ ನಂತರ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎಐಎಡಿಎಂಕೆ ಸ್ಪರ್ಧಿಸಿರುವ ಮೂರು ಚುನಾವಣೆಗಳಲ್ಲಿ ಸೋತಿದೆ. ಇತ್ತೀಚಿನ ಉಪ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿಕೂಟ ಸೋಲನುಭವಿಸಿದ್ದು ಉಭಯ ಪಕ್ಷಗಳು ಒಟ್ಟಿಗೆ ಪ್ರಚಾರ ಮಾಡಿರಲಿಲ್ಲ. ಪಕ್ಷವು ಬಿಜೆಪಿಯನ್ನು ಈಗ ಹೊಣೆಗಾರಿಕೆಯನ್ನಾಗಿ ಮಾಡಲು ಎದುರು ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ನವೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಖಾಸಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾ ಅವರನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದು ಪಳನಿಸ್ವಾಮಿ ಹೇಳಿದ್ದರು.
ಬಿಜೆಪಿ ನಾಯಕರನ್ನು ಎಐಎಡಿಎಂಕೆ ಸೇರಿಸಿಕೊಳ್ಲುತ್ತಿರುವುದು ತಮಿಳುನಾಡಿನಲ್ಲಿ ಬಿಜೆಪಿ ಬೆಳೆಯುತ್ತಿದೆ ಎಂಬ ಸೂಚನೆಯಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಹೇಳಿದ್ದಾರೆ.
ಇದೀಗ ಅಗಲಿರುವ ರಾಜ್ಯದ ಘಟಾನುಘಟಿ ರಾಜಕಾರಣಿಗಳೊಂದಿಗೆ ತನ್ನನ್ನು ಹೋಲಿಸಿಕೊಂಡ ಅಣ್ಣಾಮಲೈ, "ಜೆ. ಜಯಲಲಿತಾ ಹಾಗೂ ಎಂ. ಕರುಣಾನಿಧಿಯಂತಹ ನಾಯಕರಂತೆ ನಾನು ಕೂಡ ಒಬ್ಬ ನಾಯಕನಾಗಿ ಕ್ರಮ ತೆಗೆದುಕೊಳ್ಳುತ್ತೇನೆ. ನಾನು ಮ್ಯಾನೇಜರ್ ಅಲ್ಲ, ಆದರೆ ನಾಯಕ" ಎಂದು ಹೇಳಿದರು.
ಬಿಜೆಪಿ ನಾಯಕರನ್ನು ಪಕ್ಷಕ್ಕೆ ಸೆಳೆಯಲಾಗುತ್ತಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಎಐಎಡಿಎಂಕೆ ವಕ್ತಾರ ಕೋವಾಯಿ ಸತ್ಯನ್ ಅವರು, "ರಾಜ್ಯದಲ್ಲಿ ಬಿಜೆಪಿ ನಗಣ್ಯ ಸ್ಥಿತಿಯಲ್ಲಿದೆ. ಅಣ್ಣಾಮಲೈ ತಮ್ಮ ನಾಯಕತ್ವದಿಂದ ನಾಮನಿರ್ದೇಶನಗೊಂಡ ಕಾರ್ಪೊರೇಟ್ ಪಕ್ಷದ ವ್ಯವಸ್ಥಾಪಕರಾಗಿದ್ದಾರೆ'' ಎಂದು ಹೇಳಿದ್ದಾರೆ.