ಕಾಲಿಗೆ ಕ್ಯಾಮೆರಾ ಕಟ್ಟಿದ್ದ ಗೂಢಚಾರಿ ಪಾರಿವಾಳ ಒಡಿಶಾ ಕರಾವಳಿಯಲ್ಲಿ ಪತ್ತೆ!
ಪರಾದೀಪ್: ಕ್ಯಾಮೆರಾ ಮತ್ತು ಮೈಕ್ರೊಚಿಪ್‌ನಂತಿರುವ ಸಾಧನಗಳನ್ನು ಕಾಲಿಗೆ ಕಟ್ಟಿದ್ದ ಪಾರಿವಾಳವೊಂದನ್ನು ಜಗತ್‌ಸಿಂಗ್‌ಪುರ ಜಿಲ್ಲೆಯ ಪರಾದೀಪ್ ಕರಾವಳಿ ಪ್ರದೇಶದ ಆಚೆ ಮೀನುಗಾರಿಕೆ ದೋಣಿಯೊಂದು ಹಿಡಿದಿದೆ. ಈ ಪಾರಿವಾಳವನ್ನು ಗೂಢಚಾರಿಕೆಗೆ ಬಳಸಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೆಲವು ಮೀನುಗಾರರು ಆ ಪಾರಿವಾಳವು ತಮ್ಮ ದೋಣಿಯ ಮೇಲೆ ಕುಳಿತಿರುವುದನ್ನು ಕೆಲವು ದಿನಗಳ ಹಿಂದೆ ಗಮನಿಸಿದ್ದರು. ಆ ಪಾರಿವಾಳವನ್ನು ಸೆರೆ ಹಿಡಿದಿದ್ದ ಮೀನುಗಾರರು, ನಂತರ ಅದನ್ನು ಬುಧವಾರ ಪರಾದೀಪ್‌ನ ಕರಾವಳಿ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಜಗತ್‌ಸಿಂಗ್‌ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಆರ್.ಆರ್., "ಪಾರಿವಾಳವನ್ನು ನಮ್ಮ ಪಶು ತಜ್ಞರು ಪರೀಕ್ಷಿಸುತ್ತಿದ್ದಾರೆ. ಅದರ ಕಾಲಿಗೆ ಕಟ್ಟಿರುವ ಸಾಧನಗಳನ್ನು ಪರೀಕ್ಷಿಸಲು ನಾವು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ನೆರವು ಪಡೆಯಲಿದ್ದೇವೆ. ಆ ಸಾಧನಗಳು ಕ್ಯಾಮೆರಾ ಹಾಗೂ ಮೈಕ್ರೊಚಿಪ್‌ನಂತೆ ಕಾಣುತ್ತಿವೆ" ಎಂದು ಹೇಳಿದ್ದಾರೆ.
ಇದಲ್ಲದೆ ಸ್ಥಳೀಯ ಪೋಲೀಸರಿಗೆ ಅರ್ಥವಾಗದ ಭಾಷೆಯಲ್ಲಿ ಪಾರಿವಾಳದ ರೆಕ್ಕೆಗಳ ಮೇಲೆ ಏನೋ ಬರೆದಿರುವಂತೆ ಕಾಣಿಸುತ್ತಿದೆ. "ಏನು ಬರೆಯಲಾಗಿದೆ ಎಂಬುದರ ಬಗ್ಗೆಯೂ ತಜ್ಞರ ನೆರವು ಪಡೆಯಲಾಗುವುದು" ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಹತ್ತು ದಿನಗಳ ಹಿಂದೆ ಕೊನಾರ್ಕ್‌ನಿಂದ 35 ಕಿಮೀ ದೂರದಲ್ಲಿ ದೋಣಿಯು ಲಂಗರು ಹಾಕಿದ್ದಾಗ ದೋಣಿಯ ಮೇಲೆ ಪಾರಿವಾಳ ಕಂಡು ಬಂದಿತ್ತು. ಅದು ಹತ್ತಿರಕ್ಕೆ ಬಂದಾಗ ಮೀನುಗಾರ ಪೀತಾಂಬರ ಬೆಹೆರಾ ಅದನ್ನು ಸೆರೆ ಹಿಡಿದಿದ್ದರು. "ಕಳೆದ ಹಲವಾರು ದಿನಗಳಿಂದ ಪಾರಿವಾಳಕ್ಕೆ ನುಚ್ಚಕ್ಕಿ ತಿನ್ನಿಸಿದ್ದೇನೆ" ಎಂದು ಬೆಹೆರಾ ತಿಳಿಸಿದ್ದಾರೆ.
ಇದನ್ನೂ ಓದಿ: ಜಯಲಲಿತಾಗೆ ಯಾರನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ: ಅಣ್ಣಾಮಲೈಗೆ ತಿರುಗೇಟು ನೀಡಿದ ಎಐಎಡಿಎಂಕೆ ನಾಯಕ