ನ್ಯಾಯಾಧೀಶೆಯ ತಿರುಚಿದ ಅಶ್ಲೀಲ ಫೋಟೊ ಹಂಚಿದ ದುಷ್ಕರ್ಮಿಯಿಂದ 20 ಲಕ್ಷ ರೂ,.ಗೆ ಬೇಡಿಕೆ !

Update: 2023-03-09 09:52 GMT

ಜೈಪುರ: ನ್ಯಾಯಾಧೀಶೆಯೊಬ್ಬರ ತಿರುಚಿದ ಫೋಟೊಗಳನ್ನು ಹಂಚಿಕೊಂಡು ಬ್ಲ್ಯಾಕ್‌ಮೇಲ್ ಮಾಡಿರುವ ದುಷ್ಕರ್ಮಿಯೊಬ್ಬ, ಅವನ್ನು ಸಾರ್ವಜನಿಕಗೊಳಿಸಬಾರದಿದ್ದರೆ ರೂ. 20 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ದುಷ್ಕರ್ಮಿಯನ್ನು ಗುರುತಿಸಲಾಗಿದ್ದು, ಆತನನ್ನು ಪತ್ತೆ ಹಚ್ಚುವ ಪ್ರಯತ್ನಗಳು ಮುಂದುವರಿದಿವೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶೆಯ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಂಡಿರುವ ಆರೋಪಿಯು, ಅವನ್ನು ಎಡಿಟ್‌ ಮಾಡಿ, ನ್ಯಾಯಾಧೀಶೆಯ ಕೊಠಡಿ ಹಾಗೂ ಆಕೆಯ ನಿವಾಸಕ್ಕೆ ರವಾನಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಫೆಬ್ರವರಿ 28ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಫೆಬ್ರವರಿ 7ರಂದು ದಾಖಲಾಗಿರುವ ಪ್ರಾಥಮಿಕ ವರದಿಯಲ್ಲಿ, ವ್ಯಕ್ತಿಯೊಬ್ಬ ಪೊಟ್ಟಣವೊಂದನ್ನು ಆಕೆಯ ಮಕ್ಕಳ ಶಾಲೆಯಿಂದ ಬಂದಿರುವ ಪಾರ್ಸೆಲ್ ಎಂದು ನ್ಯಾಯಾಧೀಶೆಯ ಶೀಘ್ರಲಿಪಿಕಾರರಿಗೆ ಹಸ್ತಾಂತರಿಸಿದ್ದ. ಶೀಘ್ರಲಿಪಿಕಾರರು ಹೆಸರು ಕೇಳಿದಾಗ ಏನನ್ನೂ ಹೇಳದೆ ಹೊರಟು ಹೋಗಿದ್ದ.

ಪಾರ್ಸೆಲ್‌ನಲ್ಲಿ ಸ್ವಲ್ಪ ಸಿಹಿ ತಿನಿಸುಗಳು ಹಾಗೂ ನ್ಯಾಯಾಧೀಶೆಯ ತಿರುಚಿದ ಅಶ್ಲೀಲ ಫೋಟೊಗಳು ಹಾಗೂ ಪತ್ರವೊಂದಿತ್ತು. ಆ ಪತ್ರದಲ್ಲಿ ದುಷ್ಕರ್ಮಿಯು, ಒಂದು ವೇಳೆ ಆಕೆ ರೂ. 20 ಲಕ್ಷ ಪಾವತಿಸದಿದ್ದರೆ ಅವನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದ.

ಪತ್ರದಲ್ಲಿ, "ರೂ. 20 ಲಕ್ಷದೊಂದಿಗೆ ಸಿದ್ಧವಾಗಿರು. ಇಲ್ಲವಾದರೆ ನಿನ್ನ ಹಾಗೂ ನಿನ್ನ ಕುಟುಂಬದ ಬದುಕನ್ನು ಹಾಳು ಮಾಡುತ್ತೇನೆ. ಸಮಯ ಹಾಗೂ ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು" ಎಂದು ಬರೆದಿತ್ತು ಎಂದು ನ್ಯಾಯಾಧೀಶೆ ದೂರು ನೀಡಿದ್ದಾರೆ.

ಅದೇ ಬಗೆಯ ಮತ್ತೊಂದು ಪಾರ್ಸೆಲ್ ಅನ್ನು 20 ದಿನಗಳ ನಂತರ ನ್ಯಾಯಾಧೀಶೆಯ ನಿವಾಸಕ್ಕೂ ಕಳಿಸಲಾಗಿತ್ತು. ಆನಂತರವೇ ಆಕೆ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಯು 20 ವರ್ಷ ವಯಸ್ಸಿನವನಂತೆ ಕಾಣಿಸುತ್ತಿದ್ದು, ನ್ಯಾಯಾಧೀಶೆಯ ಕೊಠಡಿಗೆ ಆ ಪಾರ್ಸೆಲ್ ಒಯ್ಯುತ್ತಿರುವ ದೃಶ್ಯ ನ್ಯಾಯಾಲಯದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Similar News