ಜಾಮೀನು ಆಲಿಕೆಗೆ ಮುನ್ನಾದಿನವೇ ಮನೀಶ್‌ ಸಿಸೋಡಿಯಾರನ್ನು ಬಂಧಿಸಿದ ಈಡಿ

Update: 2023-03-09 17:16 GMT

ಹೊಸದಿಲ್ಲಿ, ಮಾ. 9: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ಸಿಬಿಐ ನ್ಯಾಯಾಲಯದ ಮುಂದೆ ಶುಕ್ರವಾರ ವಿಚಾರಣೆಗೆ ಬರುವುದಕ್ಕಿಂತ ಒಂದು ದಿನ ಮೊದಲು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. 

ಈಗ ರದ್ದುಗೊಳಿಸಲಾದ ದಿಲ್ಲಿ ಅಬಕಾರಿ ನೀತಿ ಹಗರಣದ ಕುರಿತಂತೆ ಮನೀಷ್ ಸಿಸೋಡಿಯಾ ಅವರನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಜಾರಿ ನಿರ್ದೇಶನಾಲಯ ಬಂಧಿಸಿದೆ. 

ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಒಂದು ದಿನ ಮೊದಲೇ ಬಂಧನ ನಡೆದಿರುವುದು ಸಿಸೋಡಿಯಾ ಅವರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿದೆ. 
ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಬಂಧಿಸಿ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿತ್ತು. ಸಿಬಿಐ ಕಸ್ಟಡಿ ಪೂರ್ಣಗೊಂಡ ಬಳಿಕ ನ್ಯಾಯಾಂಗ ಬಂಧನದ ಅಡಿಯಲ್ಲಿ ಅವರನ್ನು ದಿಲ್ಲಿಯ ತಿಹಾರ್ ಕಾರಾಗೃಹದಲ್ಲಿ ಇರಿಸಲಾಗಿತ್ತು. 

‘‘ಮನೀಷ್ ಸಿಸೋಡಿಯಾ ಅವರನ್ನು ಸಿಬಿಐ ಮೊದಲು ಬಂಧಿಸಿತ್ತು. ದಾಳಿಯ ಸಂದರ್ಭ ಸಿಬಿಐಗೆ ಯಾವುದೇ ಸಾಕ್ಷಿಯಾಗಲಿ, ನಗದಾಗಲಿ ದೊರಕಿರಲಿಲ್ಲ. ಅವರ ಜಾಮೀನು ಅರ್ಜಿ ನಾಳೆ ವಿಚಾರಣೆ ನಡೆಯಲಿತ್ತು. ಅವರು ನಾಳೆ ಬಿಡುಗಡೆಯಾಗಲಿದ್ದರು. ಆದುದರಿಂದ ಜಾರಿ ನಿರ್ದೇಶನಾಲಯ ಅವರನ್ನು ಇಂದು ಬಂಧಿಸಿದೆ. ಪ್ರತಿ ದಿನ ಹೊಸ ನಕಲಿ ಪ್ರಕರಣಗಳನ್ನು ಸೃಷ್ಟಿಸುವ ಮೂಲಕ ಯಾವುದೇ ರೀತಿಯಿಂದಾದರೂ ಸಿಸೋಡಿಯಾ ಅವರನ್ನು ಕಾರಾಗೃಹದಲ್ಲೇ ಇರಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಇದನ್ನು ಜನರು ನೋಡುತ್ತಿದ್ದಾರೆ. ಅವರು ಉತ್ತರ ನೀಡಲಿದ್ದಾರೆ’’ ಎಂದು ಕೇಜ್ರಿವಾಲ್ ಅವರು ಇಂದು ಸಂಜೆ ಟ್ವೀಟ್ ಮಾಡಿದ್ದಾರೆ.

Similar News