ನಾನು ಪ್ರತಿಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿದ ಬಳಿಕ ಸುಳ್ಳು ಸುದ್ದಿ ಹರಡಿತು: ತಮಿಳುನಾಡು ಸಿಎಂ ಸ್ಟಾಲಿನ್
ಚೆನ್ನೈ: 2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸುವುದಕ್ಕಾಗಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ನಾನು ಕರೆ ನೀಡಿದ ಒಂದು ದಿನದ ಬಳಿಕ, ರಾಜ್ಯದಲ್ಲಿ ವಲಸಿಗ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಗಳು ಹರಡಿದವು ಎಂದು ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಗುರುವಾರ ಹೇಳಿದ್ದಾರೆ.
ಕಳೆದ ಎರಡು ವಾರಗಳಲ್ಲಿ, ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲೆ, ಅದರಲ್ಲೂ ಮುಖ್ಯವಾಗಿ ಬಿಹಾರದ ವಲಸಿಗ ಕಾರ್ಮಿಕರ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ ಹಾಗೂ ಅವರ ಕೊಲೆಯೂ ನಡೆದಿದೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಈ ಸುಳ್ಳು ಸುದ್ದಿಗೆ ಸಂಬಂಧಿಸಿದ ವೀಡಿಯೊಗಳೂ ವೈರಲ್ ಆಗಿವೆ.
ಈ ಸುದ್ದಿಗಳು ಸುಳ್ಳು ಮತ್ತು ವೀಡಿಯೊಗಳು ನಕಲಿ ಎಂಬುದಾಗಿ ತಮಿಳುನಾಡು ಪೊಲಿಸರು ಮತ್ತು ರಾಜ್ಯದ ಅಧಿಕಾರಿಗಳು ಹೇಳಿದ್ದಾರೆ. ವಾಸ್ತವಾಂಶ ಪತ್ತೆಹಚ್ಚುವ ವೆಬ್‌ಸೈಟ್‌ಗಳೂ ಅವರ ಹೇಳಿಕೆಗಳನ್ನು ದೃಢೀಕರಿಸಿವೆ. ಸುಳ್ಳು ಸುದ್ದಿ ಹರಡಿರುವುದಕ್ಕಾಗಿ ಉತ್ತರಪ್ರದೇಶದ ಬಿಜೆಪಿ ವಕ್ತಾರ, ಕೇಂದ್ರ ಸರಕಾರ ಮತ್ತು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ವೆಬ್‌ಸೈಟ್ OpIndia ಹಾಗೂ ಹಿಂದಿ ಪತ್ರಿಕೆ ‘ದೈನಿಕ್ ಭಾಸ್ಕರ್’ನ ಓರ್ವ ಸಂಪಾದಕನ ವಿರುದ್ಧ ತಮಿಳುನಾಡು ಪೊಲೀಸರು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.
ಉತ್ತರ ಭಾರತದ ಬಿಜೆಪಿ ನಾಯಕರು ಸ್ವಾರ್ಥಕ್ಕಾಗಿ ಇಂಥ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಮ್‌ಕೆ) ಅಧ್ಯಕ್ಷ ಸ್ಟಾಲಿನ್ ಗುರುವಾರ ಆರೋಪಿಸಿದರು.
‘‘ವಿವಿಧ ರಾಜ್ಯಗಳಿಗೆ ಸೇರಿದ ಜನರು ಹಲವು ದಶಕಗಳಿಂದ ತಮಿಳುನಾಡಿನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಉದ್ಯೋಗವನ್ನರಸಿಕೊಂಡು ತುಂಬಾ ಜನರು ಬಂದಿದ್ದಾರೆ. ಈ ಜನರಿಗೆ ರಾಜ್ಯದ ಯಾವುದೇ ಭಾಗದಲ್ಲೂ ಯಾವತ್ತೂ ಸಮಸ್ಯೆಯಾಗಿಲ್ಲ’’ ಎಂದರು.
ಅಪಪ್ರಚಾರ ಹರಡುವಿಕೆಯ ಸಮಯ ನೋಡಿದರೆ, ಬಿಜೆಪಿಯ ಕಾರ್ಯಸೂಚಿಯನ್ನು ಜನರು ಅರ್ಥಮಾಡಿಕೊಳ್ಳಬಲ್ಲರು ಎಂದು ಮುಖ್ಯಮಂತ್ರಿ ಹೇಳಿದರು.
ತನ್ನ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಮಾರ್ಚ್ 1ರಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸ್ಟಾಲಿನ್ ಪ್ರತಿಪಕ್ಷ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದರು. 2024ರ ಚುನಾವಣೆಯಲ್ಲಿ, ಬಿಜೆಪಿಯನ್ನು ಸೋಲಿಸುವುದು ಎಲ್ಲಾ ಪ್ರತಿಪಕ್ಷಗಳ ಏಕೈಕ ಗುರಿಯಾಗಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕರೆ ನೀಡಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಹಾರ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿದ್ದರು.