×
Ad

ಶನಿವಾರ ಈಡಿ ಮುಂದೆ ವಿಚಾರಣೆಗೆ ಹಾಜರು: ತೆಲಂಗಾಣ ಮುಖ್ಯಮಂತ್ರಿ ಪುತ್ರಿ ಕವಿತಾ

Update: 2023-03-09 19:39 IST

ಹೈದರಾಬಾದ್, ಮಾ. 9: ದಿಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯದ ವಿಚಾರಣೆಯನ್ನು ಎದುರಿಸಲು ಶನಿವಾರ ಹಾಜರಾಗುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌ರ ಮಗಳು ಕೆ. ಕವಿತಾ ಬುಧವಾರ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಅನುಷ್ಠಾನ ನಿರ್ದೇಶನಾಲಯದ ಮುಂದೆ ಗುರುವಾರ ಹಾಜರಾಗುವಂತೆ ಭಾರತ ರಾಷ್ಟ್ರ ಸಮಿತಿಯ ಶಾಸಕಿಯೂ ಆಗಿರುವ ಕವಿತಾರಿಗೆ ಸೂಚಿಸಲಾಗಿತ್ತು.

ದಿಲ್ಲಿ ಸರಕಾರದ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ, ಹೈದರಾಬಾದ್‌ನ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೆಯನ್ನು ಬಂಧಿಸಿದ ಒಂದು ದಿನದ ಬಳಿಕ ಅನುಷ್ಠಾನ ನಿರ್ದೇಶನಾಲಯವು ಕವಿತಾಗೆ ಈ ಸೂಚನೆ ನೀಡಿದೆ. ಕಂಪೆನಿಯೊಂದರಲ್ಲಿ ಪಾಲುದಾರರಾಗಿರುವ ಪಿಳ್ಳೆ, ವಾಸ್ತವವಾಗಿ ಕಂಪೆನಿಯಲ್ಲಿ ‘ಬೇನಾಮಿ’ಯಾಗಿ ಕವಿತಾರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಈಡಿ ಹೇಳಿಕೊಂಡಿದೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕೆಂದು ಆಗ್ರಹಿಸಿ ದಿಲ್ಲಿಯಲ್ಲಿ ಶುಕ್ರವಾರ ನಡೆಯಲಿರುವ ಧರಣಿಯಲ್ಲಿ ನಾನು ಭಾಗವಹಿಸಬೇಕಾಗಿದೆ ಎಂದು ಕವಿತಾ ಹೇಳಿದ್ದಾರೆ.

ಅನುಷ್ಠಾನ ನಿರ್ದೇಶನಾಲಯದ ಸಮನ್ಸ್‌ಗಳು ಕೇಂದ್ರ ಸರಕಾರದ ‘‘ಬೆದರಿಕೆ ತಂತ್ರಗಳು’’ ಎಂಬುದಾಗಿ ಅವರು ಬಂಧಿಸಿದ್ದಾರೆ. ಆದರೆ, ನಾನು ಕೇಂದ್ರದ ತನಿಖಾ ಸಂಸ್ಥೆಯೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದ್ದಾರೆ.

ಈಡಿ ಸಮನ್ಸ್‌ಗಳಲ್ಲ, ಮೋದಿ ಸಮನ್ಸ್‌ಗಳು: ಕೆಟಿಆರ್

ಬಿಆರ್‌ಎಸ್ ಶಾಸಕಿ ಕೆ. ಕವಿತಾರಿಗೆ ನೀಡಿರುವುದು ಈಡಿ ಸಮನ್ಸ್‌ಗಳಲ್ಲ, ಅವುಗಳು ಮೋದಿ ಸಮನ್ಸ್‌ಗಳು ಎಂದು ಅವರ ಸಹೋದರ ಹಾಗೂ ತೆಲಂಗಾಣ ಸರಕಾರದ ಸಚಿವ ಕೆ.ಟಿ. ರಾಮರಾವ್ ಗುರುವಾರ ಹೇಳಿದ್ದಾರೆ.

ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಹಾಜರಾಗುವಂತೆ ಅನುಷ್ಠಾನ ನಿರ್ದೇಶನಾಲಯ ಕವಿತಾರಿಗೆ ಸಮನ್ಸ್ ನೀಡಿದ ಒಂದು ದಿನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ರ ನಾಯಕತ್ವದಲ್ಲಿ ಭಾರತ್ ರಾಷ್ಟ್ರ ಸಮಿತಿಯ ಬೆಳವಣಿಗೆಯನ್ನು ಗಮನಿಸಿ ನಮ್ಮ ವಿಧಾನ ಪರಿಷತ್ ಸದಸ್ಯೆ ಕವಿತಾರಿಗೆ ಇಡಿ ಸಮನ್ಸ್ ನೀಡಲಾಗಿದೆ. ವಾಸ್ತವವಾಗಿ ಇವುಗಳು ಮೋದಿ ಸಮನ್ಸ್‌ಗಳು. ಇವುಗಳು ಅಗ್ಗದ ಚುನಾವಣಾ ತಂತ್ರಗಳು’’ ಎಂದು ಅವರು ಹೇಳಿದರು.

ಸಿಬಿಯ, ಈಡಿ ಮತ್ತು ಆದಾಯ ತೆರಿಗೆ ಸಂಸ್ಥೆಗಳು ಕೇಂದ್ರ ಸರಕಾರದ ಕೈಯಲ್ಲಿರುವ ‘‘ಗೊಂಬೆಗಳು’’ ಎಂದು ಅವರು ಬಣ್ಣಿಸಿದರು.

ಅದಾನಿ ಗುಂಪಿನ ಬಗ್ಗೆ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯ ವೌನವನ್ನು ಅವರು ಪ್ರಶ್ನಿಸಿದರು. ‘‘‘ಚಾಯ್ ಪೇ ಚರ್ಚಾ’ ಮತ್ತು ‘ಪರೀಕ್ಷಾ ಪೇ ಚರ್ಚಾ’ ಮುಂತಾದ ಕಾರ್ಯಕ್ರಮಗಳಿಗೆ ಮಾತ್ರ ಪ್ರಧಾನಿಗೆ ಸಮಯವಿದೆ. ಅವರು ನಿಜವಾಗಿ ಯಾವತ್ತಾದರೂ ಚಹಾ ಮಾರಿದ್ದಾರೆಯೇ ಅಥವಾ ಪರೀಕ್ಷೆ ಬರೆದಿದ್ದಾರೆಯೇ ಎನ್ನುವುದು ಯಾರಿಗೂ ಗೊತ್ತಿಲ್ಲ’’ ಎಂದು ಕೆಟಿಆರ್ ಹೇಳಿದರು.

Similar News