ಸತತ ಎರಡನೇ ಬಾರಿಗೆ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ವಿರೋಧ ಪಕ್ಷ ಇಲ್ಲ!

Update: 2023-03-10 03:13 GMT

ಗುವಾಹತಿ: ನಾಗಾಲ್ಯಾಂಡ್ ರಾಜ್ಯ ವಿಧಾನಸಭೆಯಲ್ಲಿ ಸತತ ಎರಡನೇ ಅವಧಿಗೆ ವಿರೋಧ ಪಕ್ಷಗಳು ಇರುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಮುಖ್ಯಮಂತ್ರಿ ನಿಂಫು ರಿಯೊ ಅವರಿಗೆ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ಈ ಎಲ್ಲ ಪಕ್ಷಗಳು ಸರ್ಕಾರ ಸೇರಿಕೊಳ್ಳುತ್ತವೆಯೇ ಅಥವಾ ಬಾಹ್ಯ ಬೆಂಬಲ ನೀಡುತ್ತವೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ನಾಗಾಲ್ಯಾಂಡ್‌ನ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ವೈ.ಪಟ್ಟಾನ್ ಹೇಳಿದ್ದಾರೆ.

2021ರಲ್ಲಿ ಅಧಿಕಾರದಲ್ಲಿದ್ದ ಎನ್‌ಡಿಪಿಪಿ-ಬಿಜೆಪಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಅಲಯನ್ಸ್ ಸರ್ಕಾರವನ್ನು ಯುನೈಟೆಡ್ ಡೆಮಾಕ್ರಟಿಕ್ ಅಲಯನ್ಸ್ (ಯುಡಿಎ) ಎಂದು ಮರು ನಾಮಕರಣ ಮಾಡಿದ ಬಳಿಕ ಎಲ್ಲ ಪಕ್ಷಗಳ ಸರ್ಕಾರ ಆಡಳಿತ ನಡೆಸುತ್ತಿತ್ತು. ಅಂದು ಏಕೈಕ ವಿರೋಧ ಪಕ್ಷವಾಗಿದ್ದ 26 ಶಾಸಕರ ಎನ್‌ಪಿಎಫ್ ಒಬ್ಬ ಪಕ್ಷೇತರ ಶಾಸಕನ ಜತೆಗೆ ಸರ್ಕಾರ ಸೇರಿಕೊಂಡಿತ್ತು.

ಫೆಬ್ರುವರಿ 27ರ ಚುನಾವಣೆ ಬಳಿಕ ಈ ಬಾರಿಯೂ ರಾಜ್ಯ ಅದೇ ಹಾದಿ ಹಿಡಿದಿದೆ. 60 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟ 37 ಸ್ಥಾನಗಳನ್ನು ಗೆದ್ದಿತ್ತು. "ಎಲ್ಲ ಪಕ್ಷಗಳ ಸದಸ್ಯರು ಸರ್ಕಾರವನ್ನು ಬೆಂಬಲಿಸುವ ಪತ್ರವನ್ನು ನೀಡಿರುವುದರಿಂದ ವಿರೋಧ ಪಕ್ಷ ರಹಿತ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎನ್ನುವುದು ಯಾರಿಗೆ ಗೊತ್ತಿತ್ತು. ಚುನಾಯಿತ ಸದಸ್ಯರು ಬಾಹ್ಯ ಬೆಂಬಲ ನೀಡಿದಾಗ, ನಾವು ಚರ್ಚಿಸಬೇಕಾಗುತ್ತದೆ ಹಾಗೂ ಚರ್ಚೆಯ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪ್ರಸ್ತುತ ನಾವು 37 ಸ್ಥಾನಗಳೊಂದಿಗೆ ಸುಭದ್ರವಾಗಿದ್ದೇವೆ" ಎಂದು ಪಟ್ಟಾನ್ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಂಟು ಪಕ್ಷಗಳು ಸ್ಥಾನಗಳನ್ನು ಗೆದ್ದಿವೆ. 20 ಸದಸ್ಯರನ್ನು ಹೊಂದಿದ ಬಿಜೆಪಿ ರಿಯೊ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಬಳಿಕ ಮೂರನೇ ಅತಿದೊಡ್ಡ ಪಕ್ಷವಾದ ಎನ್‌ಸಿಪಿ ಕೂಡಾ ಬೆಂಬಲ ಘೋಷಣೆ ಮಾಡಿತ್ತು. ಎನ್‌ಸಿಪಿ ಏಳು ಸದಸ್ಯರನ್ನು ಹೊಂದಿದೆ. ತಲಾ ಎರಡು ಶಾಸಕರನ್ನು ಹೊಂದಿರುವ ಲೋಕಜನಶಕ್ತಿ- ರಾಮ ವಿಲಾಸ್ ಹಾಗೂ ರಾಮದಾಸ್ ಅಠಾವಳೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಮೂವರು ಶಾಸಕರನ್ನು ಹೊಂದಿದ ಎನ್‌ಪಿಪಿ ಕೂಡಾ ಎನ್‌ಡಿಎ ತೆಕ್ಕೆಯಲ್ಲಿವೆ. ಏಕೈಕ ಜೆಡಿಯು ಶಾಸಕ ಸರ್ಕಾರವನ್ನು ಬೆಂಬಲಿಸಿದ್ದಾರೆ.

Similar News