'ಉದ್ಯೋಗಕ್ಕಾಗಿ ಭೂಮಿ' ಪ್ರಕರಣ: ಲಾಲೂ ಪುತ್ರ ತೇಜಸ್ವಿ ಯಾದವ್‌ ಮನೆಗೆ ಈಡಿ ದಾಳಿ

Update: 2023-03-10 06:34 GMT

ಹೊಸದಿಲ್ಲಿ: ಕೇಂದ್ರ ತನಿಖಾ ದಳವು ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರನ್ನು ಸತತವಾಗಿ ಪ್ರಶ್ನಿಸಿದ ಬಳಿಕ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ದಿಲ್ಲಿಯ ಮನೆಯನ್ನು 'ಉದ್ಯೋಗಕ್ಕಾಗಿ ಭೂಮಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. 

ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

ಸಿಬಿಐ ಮಾರ್ಚ್ 7 ರಂದು ಮಾಜಿ ಕೇಂದ್ರ ರೈಲ್ವೇ ಸಚಿವ ಲಾಲು ಯಾದವ್ ಅವರನ್ನು ಐದು ಗಂಟೆಗಳ ಕಾಲ ಅವರ ಮಗಳು ಮಿಸಾ ಭಾರ್ತಿ ಮನೆಯಲ್ಲಿ ವಿಚಾರಣೆ ನಡೆಸಿತ್ತು. ಅವರು ಪ್ರಸ್ತುತ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ನಂತರ ಮಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಒಂದು ದಿನದ ಹಿಂದೆ, ತನಿಖಾ ಸಂಸ್ಥೆಯು ರಾಬ್ರಿ ದೇವಿ ಅವರನ್ನು ಅವರ ಪಾಟ್ನಾ ನಿವಾಸದಲ್ಲಿ ವಿಚಾರಣೆ ನಡೆಸಿತ್ತು.

ಯಾದವ್ ದಂಪತಿಗಳು ಮತ್ತು ಅವರ ಪುತ್ರಿಯರಾದ ಮಿಸಾ ಮತ್ತು ಹೇಮಾ ಅವರನ್ನೂ ಹೆಸರಿಸಿರುವ ಈ ಸಿಬಿಐ ಪ್ರಕರಣವು 2004 ರಿಂದ 2009 ರ ವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಉದ್ಯೋಗಕ್ಕಾಗಿ ಬದಲಾಗಿ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ಅಗ್ಗದ ದರದಲ್ಲಿ ಭೂಮಿ ಖರೀದಿಸಿದ್ದಾರೆ ಎಂಬ ಆರೋಪವನ್ನು ಆಧರಿಸಿದೆ.

Similar News