×
Ad

ಕಿಡ್ನಿ ದಾನ ಮಾಡಿ 30 ವರ್ಷದ ಮಗಳ ಪ್ರಾಣ ಉಳಿಸಿದ ತಾಯಿ

Update: 2023-03-10 14:28 IST

ಹೊಸದಿಲ್ಲಿ: ನವಿ ಮುಂಬೈನ ವಾಶಿ ನಿವಾಸಿ, 30 ವರ್ಷದ ನೇಹಾ ಸಿಂಗ್‌ ಅವರಿಗೆ ಅವರ ತಾಯಿಯೇ ಕಿಡ್ನಿ ದಾನ ಮಾಡಿ ತಮ್ಮ ಮಗಳ ಜೀವ ಉಳಿಸಿದ್ದಾರೆ.

ನೇಹಾ ಸಿಂಗ್‌ ಅವರಿಗೆ ಎಂಡ್-ಸ್ಟೇಜ್‌ ಕ್ರೋನಿಕ್‌ ಕಿಡ್ನಿ ಕಾಯಿಲೆ ಇರುವುದು ಆಗಸ್ಟ್‌ 2021 ರಲ್ಲಿ ಪತ್ತೆಯಾಗಿತ್ತು. ಅವರಿಗೆ ನಿಯಮಿತವಾಗಿ ಡಯಾಲಿಸಿಸ್‌ ಒದಗಿಸಲಾಗುತ್ತಿತ್ತು ಆದರೆ ಆಗಾಗ ಜ್ವರದಿಂದ ಬಳಲುತ್ತಿದ್ದರು. ನಂತರ ಅವರನ್ನು ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಕ್ಷಯರೋಗ ಇರುವುದು ಪತ್ತೆಯಾಗಿತ್ತು.

ನೇಹಾ ಸಿಂಗ್‌ ಅವರ ತಾಯಿ ಮಗಳಿಗೆ ಕಿಡ್ನಿ ದಾನ ಮಾಡಲು ಮುಂದಾಗಿದ್ದರೂ ಮಗಳ ಟಿಬಿ ಕಾಯಿಲೆ, ಅವರಿಬ್ಬರ ರಕ್ತದ ಗುಂಪುಗಳು ಹೊಂದಾಣಿಕೆಯಾಗದೇ ಇರುವುದು ಹಾಗೂ ತಾಯಿ ಕಿಡ್ನಿಗೆ ಸಂಬಂಧಿಸಿದಂತೆ ಮಗಳು ಪ್ರತಿಕಾಯಗಳನ್ನು ಹೊಂದಿರುವುದು ಈ ಕಿಡ್ನಿ ದಾನವನ್ನು ಭಿನ್ನವಾಗಿಸಿತ್ತು. ತಾಯಿಯ ರಕ್ತ ಗುಂಪು B+ ಆಗಿದ್ದರೆ ಮಗಳ ರಕ್ತ ಗುಂಪು A+ ಆಗಿತ್ತು.

ನೇಹಾ ಅವರಿಗೆ ಒಂದು ವರ್ಷ ಕ್ಷಯ ರೋಗಕ್ಕೆ ಚಿಕಿತ್ಸೆ ನೀಡಿದ ನಂತರ ಕಿಡ್ನಿ ಕಸಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಟಿಬಿ ರೋಗಿಯಾಗಿದ್ದವರಿಗೆ  ಬೇರೆ ರಕ್ತದ ಗುಂಪಿನವರ ಕಿಡ್ನಿ ಕಸಿ ಮಾಡುವುದು ಮತ್ತು ದಾನಿಯ ಕಿಡ್ನಿ ವಿರುದ್ಧ ಆಕೆಯ ದೇಹದಲ್ಲಿದ್ದ ಪ್ರತಿಕಾಯಗಳನ್ನು ತೆಗೆದುಹಾಕುವುದು ಸವಾಲಿನ ಕೆಲಸವಾಗಿತ್ತು ಎಂದು ಕಿಡ್ನಿ ತಜ್ಞ, ನವಿ ಮುಂಬೈನ ಮೆಡಿಕೋವರ್‌ ಆಸ್ಪತ್ರೆಯ ಡಾ. ಅಮಿತ್‌ ಲಂಗೋಟೆ ಹೇಳುತ್ತಾರೆ.

ಡಾ. ಅಮಿತ್‌ ಅವರು ಡಾ. ಅಮೋಲ್‌ ಪಾಟೀಲ್‌ ಅವರೊಂದಿಗೆ ಸೇರಿ ಎಬಿಒ-ಇನ್‌ಕಂಪ್ಯಾಟಿಬಲ್‌ ಕಿಡ್ನಿ ಕಸಿಯನ್ನು ಜನವರಿ 3 ರಂದು ಮಾಡಿದ್ದು ಈಗ  ನೇಹಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ತಾಯಿಯಾಗಿ ಮಗಳ ಕಷ್ಟ ನೋಡುವುದು ಸಾಧ್ಯವಿರಲಿಲ್ಲ, ಯಾವುದೇ ಭಯವಿಲ್ಲದೆ ಕಿಡ್ನಿ ದಾನಕ್ಕೆ ಮುಂದಾಗಿದ್ದೆ. ಈಗ ನಾವಿಬ್ಬರೂ ಚೇತರಿಸಿಕೊಂಡಿರುವುದು ಖುಷಿಯಾಗಿದೆ ಎಂದು ನೇಹಾರ ತಾಯಿ ಹೇಳಿದ್ದಾರೆ ಎಂದು freepressjournal.in ವರದಿ ಮಾಡಿದೆ.

ಇದನ್ನೂ ಓದಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನನ್ನ ಬೆಂಬಲ: ಸಂಸದೆ ಸುಮಲತಾ ಘೋಷಣೆ 

Similar News